ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಾಂಸ್ಕೃತಿಕ ಅಭಿರುಚಿ, ಅಭಿಮಾನ ಹಾಗೂ ಹಿರಿಯರ ಸನ್ನಡತೆಯ ಸಹಕಾರದಿಂದ ಸತತ ನಾಲ್ಕು ವರ್ಷಗಳಿಂದ ನಾಗೂರು ಕಲಾಪ್ರಿಯ ಬಳಗ ಪರಿಸರದ ಕಲಾಸಕ್ತರ ಮನಮುಟ್ಟುವಲ್ಲಿ ಯಶಸ್ಸು ಕಂಡಿರುವುದು ಕಲಾಕೃಷಿಯ ಸಾರ್ಥಕತೆಯನ್ನು ಬಿಂಬಿಸುತ್ತದೆ ಎಂದು ಕಿರಿಮಂಜೇಶ್ವರ-ನಾಗೂರು ಅಗಸ್ತೇಶ್ವರ ಆಟೋರಿಕ್ಷಾ, ಟ್ಯಾಕ್ಷಿ ಚಾಲಕ, ಮಾಲಕ ಸಂಘದ ಅಧ್ಯಕ್ಷ ಪ್ರವೀಣ್ಚಂದ್ರ ಶೆಟ್ಟಿ ಹೇಳಿದರು.
ನಾಗೂರು ಒಡೆಯರಮಠ ಶ್ರೀಕೃಷ್ಣಲಲಿತ ಕಲಾಮಂದಿರದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮಂಗಳವಾರ ಸಂಜೆ ನಡೆದ ಬಡಗುತಿಟ್ಟಿನ ಸಾಂಪ್ರದಾಯಿಕಾ ಯಕ್ಷಗಾನ ’ಯಕ್ಷಾಮೃತ-೪’ರ ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಹಾಗೂ ಯಕ್ಷಗುರು ಗಣೇಶ ಹೆಬ್ಬಾರ್ ಇವರನ್ನು ಸನ್ಮಾನಿಸಿ ಮಾತನಾಡಿದರು. ಸ್ವಾತಂತ್ರ್ಯ ಬಂದು ೭೦ ವರ್ಷಗಳು ಕಳೆದರೂ ನಾವೆಲ್ಲರೂ ನೆಮ್ಮದಿಯ ಜೀವನ ಕಳೆದುಕೊಳ್ಳುತ್ತಿದ್ದೇವೆ. ಕಲಾಪೋಷಕರು ಹಾಗೂ ಪ್ರೇಕ್ಷಕರು ಕಲೆ ಮತ್ತು ಕಲಾವಿದರ ಹಿಂದಿರುವ ದೊಡ್ಡಶಕ್ತಿಯಾಗಿದ್ದು, ಆ ನಿಟ್ಟಿನಲ್ಲಿ ಕರಾವಳಿ ಭಾಗದ ಸಾಂಸ್ಕೃತಿಕ ನಗರಿ ಎಂದು ಹೆಸರುಗಳಿಸಿದ ಕಿರಿಮಂಜೇಶ್ವರ-ನಾಗೂರು ಪ್ರದೇಶದ ಜನತೆಗೆ ಕಲಾಪ್ರಿಯ ಬಳಗವು ಪ್ರತೀವರ್ಷ ತನ್ನ ವಿಭಿನ್ನ ಶೈಲಿಯ ಕಾರ್ಯಕ್ರಮಗಳಿಂದ ಮನರಂಜನೆ ವಾತಾವರಣವನ್ನು ನಿರ್ಮಾಣ ಮಾಡುವ ಮೂಲಕ ಮನೆಮಾತಾಗಿದೆ ಎಂದು ಶ್ಲಾಘಿಸಿದರು. ಬಳಗದ ಪದ್ಮನಾಭ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ನಂತರ ವಿದ್ಯುಜ್ಜಿಹ್ವ-ಶರ್ಪನಖಿ ಯಕ್ಷಗಾನ ಪ್ರದರ್ಶನ ನಡೆಯಿತು.