ಕುಂದಾಪ್ರ ಡಾಟ್ ಕಾಂ ಸುದ್ದಿ,
ಬೈಂದೂರು: ಸಂಘಟನೆಯಿಂದ ಸಂಸ್ಕಾರ ವೃದ್ಧಿಸುತ್ತದೆ. ನಿಸ್ವಾರ್ಥ ಸೇವೆಯಿಂದ ದೇವರು ಹತ್ತಿರನಾಗುತ್ತಾನೆ ಮೊದಲು ನಾವು ಬದಲಾದರೆ ನಮ್ಮ ಮಕ್ಕಳು ಕೂಡಾ ನಮ್ಮನ್ನು ಅನುಸರಿಸುತ್ತಾರೆ. ಇಂದಿನ ಕಾಲಘಟ್ಟದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡುವಲ್ಲಿ ನಾವು ಎಡವಿದ್ದೇವೆ. ಎಂದು ಜಿಎಸ್‌ಬಿ ಹಿತರಕ್ಷಣಾ ವೇದಿಕೆ ಸಂಚಾಲಕ ವಿವೇಕಾನಂದ ಶೆಣೈ ಹೇಳಿದರು.
ಉಪ್ಪುಂದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ನಡೆದ ಕೊಲ್ಲೂರು ವಲಯ ಜಿಎಸ್‌ಬಿ. ಸೇವಾ ಸಮಿತಿಯ ನಾಲ್ಕನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಧಾರ್ಮಿಕ ಆಚರಣೆ ಧೃಡವಾಗಿರಬೇಕು. ಮಕ್ಕಳಿಗೆ ದೇವರು, ಧರ್ಮ, ಗುರು-ಹಿರಿಯರ ಬಗ್ಗೆ ಮನವರಿಕೆ ಮಾಡಬೇಕು ಎಂದರು.
ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಘಟನೆ ಅತೀ ಮುಖ್ಯವಾಗಿದ್ದು, ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಆಚರಣೆ, ಅನುಭವ, ಸಮೂಹ ಜೀವನ ಹಾಗೂ ಸಂಸ್ಕಾರ ನಮ್ಮ ಸಮಾಜದ ಬೆಳವಣಿಗೆಗೆ ಸಹಕಾರಿಯಾಗಿದೆ. ಪ್ರತೀ ಮನೆಗಳಲ್ಲಿಯೂ ಸಂಧ್ಯಾಕಾಲದ ಭಜನೆ ಮಾಡಬೇಕು. ಮಕ್ಕಳಿಗೆ ವ್ಯವಹಾರಿಕಾ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದ ಕುರಿತಾದ ಅರಿವು ಮೂಡಿಸಬೇಕು ಎಂದರು.
ಕೊಲ್ಲೂರು ವಲಯ ಜಿಎಸ್‌ಬಿ. ಸೇವಾ ಸಮಿತಿ ಅಧ್ಯಕ್ಷ ಬಿ. ವಿಶ್ವನಾಥ ಪಡಿಯಾರ್ ಅಧ್ಯಕ್ಷತೆವಹಿಸಿದ್ದರು. ಏಳಜಿತ್ ಶ್ರೀ ಸಿದ್ದಿವಿನಾಯಕ ಸಾಂಸ್ಕೃತಿಕ ಕೇಂದ್ರದ ಸಂಚಾಲಕ ವೈ. ಮಂಗೇಶ್ ಶೆಣೈ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಸುಗಮ ಸಂಗೀತ ಹಾಗೂ ಭಜನ್ ಗಾಯಕಿ ಶೃದ್ಧಾ ಓಂಗಣೇಶ್ ಕಾಮತ್, ಬೈವ್ಯಸೇಸ ಸಂಘದ ನಿರ್ದೇಶಕಿ ರಜನಿ ಶ್ಯಾನುಭಾಗ್ ಇವರನ್ನು ಗೌರವಿಸಲಾಯಿತು. ಸಮಿತಿಯ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು.
ಉಪ್ಪುಂದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಅಧ್ಯಕ್ಷ ದಾಮೋದರ್ ಶೆಣೈ, ಕಾರ್ಯದರ್ಶಿ ಯು. ಪಾಂಡುರಂಗ ಪಡಿಯಾರ್, ವಿವೇಕಾನಂದ ಪ್ರಭು ಜಡ್ಕಲ್, ವೈ ಸುಬ್ರಾಯ ಶ್ಯಾನುಭಾಗ್ ಉಪಸ್ಥಿತರಿದ್ದರು.
ರಾಜೇಶ್ ಕಿಣಿ ಪ್ರಾಸ್ತಾವಿಸಿದರು. ಅಕ್ಷತಾ ಶ್ಯಾನುಭಾಗ್ ಸ್ವಾಗತಿಸಿ, ಗುರುರಾಜ್ ಶ್ಯಾನುಭಾಗ್ ವಂದಿಸಿದರು. ವೈ. ಮಂಗೇಶ ಶ್ಯಾನುಭಾಗ್, ರಾಜಾರಾಮ ಪಡಿಯಾರ್ ನಿರೂಪಿಸಿದರು. ಬೆಳಿಗ್ಗೆ ಶ್ರೀ ಸತ್ಯನಾರಾಯಣ ವೃತಪೂಜೆ, ನಂತರ ಶೃದ್ಧಾ ಓಂಗಣೇಶ್ ಕಾಮತ್ ಇವರಿಂದ ಭಜನ್ ಸುಧಾ ಕಾರ್ಯಕ್ರಮ ನಡೆಯಿತು.