ಕುಂದಾಪ್ರಡಾಟ್ ಕಾಂ ಸುದ್ದಿ.
ಬೈಂದೂರು: ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ನಾವುಂದದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಬುಧವಾರ ನಡೆಯಿತು. ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಸಂಘವು ಕಳೆದ ಆರ್ಥಿಕ ವರ್ಷದಲ್ಲಿ ಠೇವಣಿ ಸಂಗ್ರಹ, ಸಾಲ ನೀಡಿಕೆ, ವಸೂಲಿ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ಸಂಸ್ಥೆ ವರ್ಷದ ಅಂತ್ಯಕ್ಕೆ ಹೊಂದಿರುವ ಠೇವಣಿಯ ಮೊತ್ತರೂ. ೨೭.೦೨ ಕೋಟಿಯಾಗಿದ್ದು ಪ್ರಸಕ್ತ ವರ್ಷ ಅದನ್ನು ಏರಿಸುವ ಗುರಿ ಹೊಂದಲಾಗಿದೆ. ರೂ ೩೩ ಕೋಟಿ ಸಾಲ ವಿತರಿಸಿ, ರೂ ೩೨ ಕೋಟಿ ವಸೂಲಾತಿ ಮಾಡಲಾಗಿದೆ. ಸಂಘ ರೂ ೧ ಕೋಟಿ ೪ ಸಾವಿರದಷ್ಟು ಲಾಭ ಗಳಿಸಿದೆ.ಸದಸ್ಯರ ಬೇಡಿಕೆಯಂತೆ ಶೇ.೧೩ ಡಿವಿಡೆಂಡ್ ನೀಡಲಾಗುವುದು ಎಂದು ಅವರು ಹೇಳಿದರು.
ಸಂಘವು ಗ್ರಾಹಕರಿಗೆ ಹೆಚ್ಚಿನ ಸೇವೆ ಒದಗಿಸುವ ದೃಷ್ಠಿಯಿಂದ ಬಡಾಕೆರೆಯಲ್ಲಿ ಪ್ರತ್ಯೇಕ ಶಾಖೆ ತೆರೆಯುವ ಯೋಜನೆ ಹೊಂದಿದೆ. ಕೃಷಿಕರಿಗೆ ಬೀಜದ ಭತ್ತ ಹಾಗೂ ಸಾವಯವ ಗೊಬ್ಬರವನ್ನು ಸಂಘದ ಮೂಲಕ ವಿತರಿಸಲಾಗುತ್ತಿದೆ ಎಂದ ಅವರು ಪ್ರಸಕ್ತ ಸಾಲಿನಲ್ಲಿ ಸುಮಾರು ೧.೭೮ಕೋಟಿಯಷ್ಟು ಕೃಷಿಕರ ಸಾಲ ಸರಕಾರದ ಸಾಲಮನ್ನ ಯೋಜನೆಯಿಂದ ಮನ್ನವಾಗಲಿದೆ ಎಂದರು.
ಸಂಘದ ಉಪಾಧ್ಯಕ್ಷ ಎಂ ಚಂದ್ರಶೀಲ ಶೆಟ್ಟಿ, ನಿರ್ದೇಶಕರುಗಳಾದ ಎಂ.ವಿನಾಯಕರಾವ್, ವಾಸು ಪೂಜಾರಿ, ಭೋಜ ನಾಯ್ಕ್, ಜಗದೀಶ ಪಿ.ಪೂಜಾರಿ, ಬಿ.ಎಚ್.ಅಬ್ದುಲ್ ರಹಿಮಾನ್, ರಾಮಕೃಷ್ಣ ಖಾರ್ವಿ, ಪ್ರಕಾಶ್ ದೇವಾಡಿಗ, ನಾಗಮ್ಮ, ಸರೋಜಾ ಆರ್.ಗಾಣಿಗ ಜಿಲ್ಲಾ ಬ್ಯಾಂಕಿನ ಪ್ರತಿನಿಧಿ ಶಿವರಾಮ ಪೂಜಾರಿ ಯಡ್ತರೆ ಉಪಸ್ಥಿತರಿದ್ದರು. ಆರಂಭದಲ್ಲಿ ಗಣೇಶ ಗಂಗೊಳ್ಳಿ ರೈತಗೀತೆ ಹಾಡಿದರು. ವ್ಯವಸ್ಥಾಪಕ ಬಿ. ರಮೇಶ ಅಡಿಗ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಸಂಜೀವ ಮಡಿವಾಳ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು.