ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಗಂಗೊಳ್ಳಿಯ ಮನೆ, ಅಂಗಡಿ, ಹೊಟೇಲ್ ಇತ್ಯಾದಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಸಮಸ್ಯೆಗೆ ಜಿಲ್ಲಾಡಳಿತ ಪರಿಹಾರ ಕಂಡು ಕೊಂಡಿದ್ದು, ಗಂಗೊಳ್ಳಿ ಗ್ರಾಮದಲ್ಲಿ ತ್ಯಾಜ್ಯ ನಿರ್ಮೂಲನೆ ಮಾಡಲು ಜನರ ಸಹಕಾರ ಅತ್ಯಗತ್ಯವಾಗಿದೆ. ಜಿಲ್ಲಾಡಳಿತ ಸ್ವಸಹಾಯ ಸಂಘಗಳ ಸಹಕಾರದೊಂದಿಗೆ ಮನೆ ಮನೆಯಿಂದ ಕಸ ಸಂಗ್ರಹಿಸುವ ಯೋಜನೆ ಹಾಕಿಕೊಂಡಿದ್ದು, ಇದಕ್ಕೆ ಪೂರ್ವಭಾವಿಯಾಗಿ ಗ್ರಾಮದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳ ಮತ್ತು ಅದರ ನಿರ್ವಹಣೆ ಬಗ್ಗೆ ಸಮೀಕ್ಷೆ ನಡೆಸಲು ಉದ್ದೇಶಿಸಿದೆ ಎಂದು ಗಂಗೊಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಿ.ಮಾಧವ ಹೇಳಿದರು.
ಅವರು ಗಂಗೊಳ್ಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ ಬಗ್ಗೆ ಮಾಹಿತಿ ಸಂಗ್ರಹ ಸಮೀಕ್ಷೆ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ ಬಗ್ಗೆ ಮಾಹಿತಿ ಸಂಗ್ರಹ ಸಂಬಂಧ ಸ್ವಸಹಾಯ ಸಂಘಗಳ ಸ್ವಯಂಸೇವಕರು ಮನೆ ಮನೆಗೆ ಬಂದಾಗ ಸರಿಯಾದ ಮಾಹಿನಿ ನೀಡಿ ಸಹಕರಿಸಬೇಕು. ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಸಂಗ್ರಹಿಸಲು ಗ್ರಾಮ ಪಂಚಾಯತ್ ವತಿಯಿಂದ ಪ್ರತಿಯೊಂದು ಮನೆಗಳಿಗೆ ಎರಡು ಬಕೆಟ್ ನೀಡಲಾಗುತ್ತಿದ್ದು ಪ್ರತಿನಿತ್ಯ ಸ್ವಸಹಾಯ ಸಂಘದ ಸ್ವಯಂಸೇವಕರ ಮೂಲಕ ಸಂಗ್ರಹಿಸಿ ವಿಲೇವಾರಿ ಮಾಡುವ ಉದ್ದೇಶ ಹೊಂದಲಾಗಿದೆ. ಇದರಿಂದ ಯಾರಿಗೂ ತೊಂದರೆಯಾಗುದಿಲ್ಲ. ಈ ಕಾರ್ಯಕ್ರಮದ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸಾರ್ವಜನಿಕರ ಸಹಕಾರದಿಂದ ಮಾತ್ರ ಈ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂದು ಅವರು ಹೇಳಿದರು.
ಗಂಗೊಳ್ಳಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಪತ್ರಕರ್ತ ಬಿ.ರಾಘವೇಂದ್ರ ಪೈ ಸಮೀಕ್ಷಾ ಕಾರ್ಯಕ್ಕೆ ಚಾಲನೆ ನೀಡಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯೆ ಮಂಜುಳಾ ದೇವಾಡಿಗ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸಿಬ್ಬಂದಿ ಉದಯ ಜಿ. ಸ್ವಾಗತಿಸಿದರು. ಶೇಖರ ಜಿ. ಕಾರ್ಯಕ್ರಮ ನಿರೂಪಿಸಿದರು. ಸಂದೀಪ ಖಾರ್ವಿ ವಂದಿಸಿದರು.