ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಿದ್ವತ್ತು, ಸೃಜನಶೀಲತೆ ಮೇಳೈಸಿದ ನಾಗೂರು ಪರಿಸರದ ಮೊಗೇರಿ ಕುಟುಂಬ ವೃಕ್ಷದ ಮೂರು ಶಾಖೆಗಳಲ್ಲಿ ಪಲ್ಲವಿಸಿ ನಾಡಿಗೆ ಪರಿಮಳ ಪಸರಿಸಿ, ಭೌತಿಕವಾಗಿ ಮರೆಯಾದ ಮೂವರು ಅಗ್ರಮಾನ್ಯ ಸಾಧಕರ ಶತಮಾನದ ಸ್ಮೃತಿಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಆಶು ಕವಯಿತ್ರಿ ಉಳ್ಳೂರಿನ ಅಚ್ಚರಿ ಮೂಕಾಂಬಿಕೆ ಅಮ್ಮನಿಗೆ ಇದು 110ನೆ ವರ್ಷವಾದರೆ, ಯುಗಪ್ರವರ್ತಕ ಕವಿ ಮೊಗೇರಿ ಗೋಪಾಲಕೃಷ್ಣ ಅಡಿಗ, ಮತ್ತು ಪ್ರತ್ಯುತ್ಪನ್ನಮತಿಯ ಕಾವ್ಯ-ವಿಮರ್ಶಾ ಸೇತು ಬವುಳಾಡಿಯ ಬಿ. ಎಚ್. ಶ್ರೀಧರ ಅವರಿಗಿದು ಶತಮಾನದ ವರ್ಷ. ಈ ತ್ರಿಮೂರ್ತಿಗಳ ಮೂಲ ಪರಿಸರದಲ್ಲಿ ಅವರ ಪ್ರತಿಭೆ, ಪ್ರಸಿದ್ಧಿಗೆ ತಕ್ಕುದಾದ ನೆನಪಿನ ಪರ್ವ 27ರಂದು ಬೆಳಿಗ್ಗೆ 9ರಿಂದ ಸಂಜೆ 6ರ ವರೆಗೆ ಬಿಡುವಿಲ್ಲದೆ ನಡೆಯುವ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಾಗೂರಿನ ಒಡೆಯರಮಠ ಗೋಪಾಲಕೃಷ್ಣ ಕಲಾಮಂದಿರದ ಬವುಳಾಡಿ ಮಹಾಲಕ್ಷ್ಮೀ ಹೆಬ್ಬಾರತಿ ಸಭಾವರಣದಲ್ಲಿ ಸಂಪನ್ನವಾಗಲಿದೆ. ನಾಗೂರಿನ ಉಳ್ಳೂರು ಮೂಕಜ್ಜಿ ಪ್ರತಿಷ್ಠಾನ, ಬೆಂಗಳೂರಿನ ಗೋಪಾಲಕೃಷ್ಣ ಅಡಿಗ ಶತಮಾನ ಪ್ರತಿಷ್ಠಾನ ಮತ್ತು ಶಿರಸಿಯ ಬಿ. ಎಚ್. ಶ್ರೀಧರ ಪ್ರಶಸ್ತಿ ಸಮಿತಿ ಈ ಸ್ಮರಣೀಯ ಕಾರ್ಯಕ್ರಮವನ್ನು ಆಯೋಜಿಸಿವೆ.
ಒಂದೊಮ್ಮೆ ಮೊಗೇರಿ ಬಳಿಯ ಹೊಸ್ಕೋಟೆಯಲ್ಲಿ ಜನಮೆಚ್ಚಿದ ವೈದ್ಯರಾಗಿದ್ದ ಶತಾಯುಷಿ ಎಸ್. ಜಿ. ಹೊಸ್ಕೋಟೆ ಕಾರ್ಯಕ್ರಮ ಉದ್ಘಾಟಿಸಿ ಸಮಷ್ಟಿ ಸನ್ಮಾನ ಸ್ವೀಕರಿಸುವರು. ಉಳ್ಳೂರು ಕುಟುಂಬದ ಘಟಂ ಪ್ರತಿಭೆ ಗಿರಿಧರ ಉಡುಪ ಶತಮಾನದ ಸ್ಮೃತಿಗೆ ಲಯ ನಾದ ನಮನ ಸಲ್ಲಿಸುವರು. ಬಳಿಕ ನಡೆಯುವ ಮಾತಿನ ಮೊಗಸಾಲೆಯಲ್ಲಿ ಡಾ. ಕನರಾಡಿ ವಾದಿರಾಜ ಭಟ್ಟ, ಡಾ. ರೇಖಾ ಬನ್ನಾಡಿ ಮೂಕಜ್ಜಿ ಅವರಿಗೆ, ಡಾ. ವಸಂತಕುಮಾರ ಪೆರ್ಲ, ವಿ. ಗಣೇಶ ಸಾಗರ ಅಡಿಗರ ಬಗೆಗೆ, ಡಾ. ಶ್ರೀಧರ ಬಳೆಗಾರ ಕುಮಟ, ಭುವನೇಶ್ವರಿ ಹೆಗಡೆ ಬಿ. ಎಚ್. ಶ್ರೀಧರರಿಗೆ ನುಡಿಮಾಲೆ ತೊಡಿಸುವರು.
ನಂತರದ ಮೂಕಜ್ಜಿ, ಅಡಿಗ, ಶ್ರೀಧರರ ರಚನೆಗಳ ದೃಶ್ಯ-ಶ್ರಾವ್ಯ ಪ್ರಸ್ತುತಿಯಲ್ಲಿ ಎರ್ನಾಕುಲಂನ ಡಾ. ರಾಮಕೃಷ್ಣ ಪೆಜತ್ತಾಯ, ಹಾರ್ಯಾಡಿಯ ಮಹೇಶ ಭಟ್ಟ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರಿಂದ ಆಶು ಕಾವ್ಯ ಮಂಡಲ, ಎಚ್. ಚಂದ್ರಶೇಖರ ಕೆದಿಲಾಯರಿಂದ ಗಾಯನ, ಕಾವ್ಯವಾಚನ, ನಾಗೂರು ಗಿರೀಶ ಐತಾಳ್ ನಿರ್ದೇಶನದ ಮೂಕಜ್ಜಿ ಹಾಡು-ಪಾಡು ರೂಪಕ, ಗರ್ತಿಕೆರೆ ರಾಘಣ್ಣ ಅವರಿಂದ ಭಾವಗೀತೆ ಪ್ರಸ್ತುತಗೊಳ್ಳುವುವು. ಹೇರಂಜಾಲು ಗೋಪಾಲ ಗಾಣಿಗ ಬಳಗದ ಯಕ್ಷ ನೃತ್ಯಾಭಿನಯ ರೂಪಕ, ಬವುಳಾಡಿ ರಾಘವೇಂದ್ರ ಉಪಾಧ್ಯಾಯರ ಸಂಗೀತ ಮೂಡಿಬರಲಿವೆ. ಸಂಜೆಯ ಸಮಾರೋಪ ಮಂಟಪದಲ್ಲಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ವೈದೇಹಿ ಮತ್ತು ಡಾ. ಎಚ್. ಶಾಂತಾರಾಮ್ ಹೊನ್ನುಡಿಗಳನ್ನಾಡುವರು.
ಕಾರ್ಯಕ್ರಮದಲ್ಲಿ ಹೊಸ ಧ್ವನಿ ಸಾಂದ್ರಿಕೆ, ಪುಸ್ತಕ, ಸ್ಮೃತಿ ಸಂಚಿಕೆ ಬಿಡುಗಡೆಯ ಜತೆಗೆ ಸಾಹಿತ್ಯ-ಸಾಹಿತಿ ಮಾಹಿತಿ ದರ್ಶನ, ಪುಸ್ತಕ ಪ್ರದರ್ಶನ, ಮಾರಾಟ, ಕವಿತ್ರಯದ ರಚನೆಗಳ ಗಾಯನ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿಕೆ ನಡೆಯುವುವು. ಸಾಹಿತ್ಯಾಸಕ್ತರು, ಅಭಿಮಾನಿಗಳು ತಪ್ಪದೇ ಬರಬೇಕು ಎಂದು ಕಾರ್ಯಕ್ರಮದ ರೂವಾರಿಗಳಾದ ಎಂ. ಜಯರಾಮ ಅಡಿಗ, ಉಳ್ಳೂರು ಸುಬ್ರಹ್ಮಣ್ಯ ಐತಾಳ, ಉಪ್ಪುಂದ ರಮೇಶ ವೈದ್ಯ, ನಾಗೂರು ಗಿರೀಶ ಐತಾಳ್ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಶತಮಾನದ ಸ್ಮೃತಿಹಬ್ಬ ಕಾರ್ಯಕ್ರಮ ನಿಮ್ಮ ‘ಕುಂದಾಪ್ರ ಡಾಟ್ ಕಾಂ’ನಲ್ಲಿ ನೇರಪ್ರಸಾರವಾಗಲಿದೆ.