ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಯಾವುದೇ ಆರ್ಥಿಕ ಸಂಸ್ಥೆಯ ಬೆಳವಣಿಗೆಯು ಆ ಸಂಸ್ಥೆಯ ಕಾರ್ಯನೀತಿ ಹಾಗೂ ಸಂಸ್ಥೆಯ ಸಿಬ್ಬಂದಿಗಳ ಕಾರ್ಯಕ್ಷಮತೆಯ ಮೇಲೆ ಅವಲಂಬಿತವಾಗಿದೆ. ಸಂಸ್ಥೆಯ ದೂರದೃಷ್ಟಿತ್ವ ಹಾಗೂ ಗ್ರಾಮೀಣ ಪ್ರದೇಶದ ಜನರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶ, ಶಿಸ್ತುಬದ್ಧ ಆಡಳಿತ ಹಾಗೂ ಅತ್ಯುತ್ತಮ ಸೇವೆ ಮೊದಲಾದವುಗಳಿಂದ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ಉಪ್ಪುಂದ ಶ್ರೀ ವರಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಹೇಳಿದರು.
ಶ್ರೀ ವರಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ೨೦೧೭-೧೮ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ದೂರದ ಮುಂಬೈ, ಹೈದರಾಬಾದ್, ಪುಣೆ ಹಾಗೂ ಬೆಂಗಳೂರಿನಲ್ಲಿ ಲಾಭದಾಯಕ ಉದ್ಯಮ ನಡೆಸುತ್ತಿದ್ದರೂ ಕೂಡಾ ನಮ್ಮೂರಿನ ಜನರಿಗೆ ಸಾಮಾಜಿಕ ಮತ್ತು ಆರ್ಥಿಕವಾಗಿ ಸ್ಪಂದಿಸುವ ಉದ್ದೇಶದಿಂದ ಊರಿನಲ್ಲಿ ಸಹಕಾರಿ ಸಂಘವನ್ನು ಆರಂಭ ಮಾಡಲಾಗಿದೆ. ಅಲ್ಲದೇ ಶ್ರೀ ವರಲಕ್ಷ್ಮೀ ಟ್ರಸ್ಟ್ ಮೂಲಕವೂ ಶೈಕ್ಷಣಿಕ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಂಘದ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸಹಾಯಹಸ್ತ ನೀಡಲಾಗುತ್ತಿದೆ. ಇದೊಂದು ಆತ್ಮತೃಪ್ತಿಗಾಗಿ ಮಾಡುವ ಸೇವೆಯೇ ಹೊರತು ಲಾಭದ ದೃಷ್ಠಿಯಿಂದಲ್ಲ ಎಂದ ಅವರು ಸಂಸ್ಥೆಯ ಗ್ರಾಹಕರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿರುವುದರಿಂದ ನಮ್ಮ ಆತ್ಮಸ್ಥೈರ್ಯ ಹೆಚ್ಚಾಗಿದ್ದು ಇನ್ನೂ ಹೆಚ್ಚಿನ ಸೇವೆ ನೀಡಲು ನಾವು ಉತ್ಸುಕರಾಗಿದ್ದೇವೆ ಎಂದರು.
ಸಂಘದ ಉಪಾಧ್ಯಕ್ಷ ಸುಧಾಕರ ಪೂಜಾರಿ, ನಿರ್ದೇಶಕರಾದ ರಾಘವೇಂದ್ರ ಪೂಜಾರಿ, ಗಣೇಶ, ಪಾರ್ವತಿ ಪೂಜಾರಿ, ಮಾಜಿ ಕಾರ್ಯನಿರ್ವಹಣಾಧಿಕಾರಿ ಅನಂತಪದ್ಮನಾಭ ನಾರಿ ಉಪಸ್ಥಿತರಿದ್ದರು. ಪ್ರಭಾರ ಕಾರ್ಯನಿರ್ವಹಣಾಧಿಕಾರಿ ನಾಗರಾಜ ಪೂಜಾರಿ ವಾರ್ಷಿಕ ವರದಿ ಹಾಗೂ ಆಯ-ವ್ಯಯ ಮಂಡಿಸಿ ಸಭೆಯಲ್ಲಿ ಅನುಮೋದನೆ ಪಡೆದರು. ನಿರ್ದೇಶಕ ನರಸಿಂಹ ಬಿ. ನಾಯಕ್ ನಿರೂಪಿಸಿದರು.