ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸೃಜನಶೀಲತೆ ಎಂಬುದು ಯಾರೊಬ್ಬರ ಸೊತ್ತಲ್ಲ. ಮಕ್ಕಳಲ್ಲಿ ಪ್ರತಿಭೆ ಇದ್ದದ್ದಾದರೆ, ತಂದೆ ತಾಯಿಯರಲ್ಲಿ ಪ್ರೋತ್ಸಾಹಿಸುವ ಗುಣವಿದ್ದರೆ ಮಕ್ಕಳು ಶ್ರೇಷ್ಠ ವ್ಯಕ್ತಿಗಳಾಗುತ್ತಾರೆ. ಕಾಳಜಿ ಹಾಗೂ ಪ್ರೀತಿಯಿಂದ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗೆ ಉತ್ತೇಜನ ದೊರೆತಾದ ಮಾತ್ರ ಅವು ಗುಣಾತ್ಮಕವಾಗಿ ಪ್ರಕಟಗೊಳ್ಳುತ್ತದೆ ಎಂದು ಬೈಂದೂರು ರತ್ತುಬಾಯಿ ಜನತಾ ಪ್ರೌಡಶಾಲೆ ಮಖ್ಯೋಪಧ್ಯಾಯ ಮಂಜು ಕಾಳಾವರ ಅವರು ಹೇಳಿದರು.
ಅವರು ರೋಟರಿ ಕ್ಲಬ್ ಬೈಂದೂರು, ಶ್ರೀ ಸಿದ್ಧಿವಿನಾಯಕ ಚೆಸ್ ಅಕಾಡೆಮಿ ರಿ. ಬೈಂದೂರು, ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್ ಹಾಗೂ ಇನ್ನರ್‌ವೀಲ್ ಕ್ಲಬ್ ಬೈಂದೂರು ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಮಿಂಚಿನ ಚದುರಂಗ ಸ್ವರ್ಧೆ 2017 ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ರೋಟರಿ ಮಾಜಿ ಗವರ್ನರ್ ಬಿ. ಜಗನ್ನಾಥ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕ್ರೀಡೆಯಲ್ಲಿ ಆಸಕ್ತಿಯಿದ್ದರೆ ಮಾತ್ರ ಸಾಧನೆಗೈಯಲು ಸಾಧ್ಯವಿದೆ. ಆಸಕ್ತರಿಗೆ ಸೂಕ್ತ ಸಮಯದಲ್ಲಿ ದೊರೆಯುವ ಅವಕಾಶದಿಂದ ಪ್ರತಿಭೆ ಬೆಳಕಿಗೆ ಬರುತ್ತದೆ ಎಂದರು.
ಬೈಂದೂರು ರೋಟರಿ ಅಧ್ಯಕ್ಷ ಹುಂಚನಿ ಕೃಷ್ಣಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಾಮ್ರಾಟ್ ಚೆಸ್ ಅಸೋಸಿಯೇಶನ್ ಅಧ್ಯಕ್ಷ ಉಮಾನಾಥ್ ಕಾಪು, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಶಾಂತಿ ಪಿರೇರಾ ಉಪಸ್ಥಿತರಿದ್ದರು. ಅಂತರಾಷ್ಟ್ರೀಯ ಚೆಸ್ ಚಾಂಪಿಯನ್ ವಿಕಲಚೇತನ ಕ್ರೀಡಾಪಟು ಸಮಂತ್ ಅವರಿಗೆ ಸನ್ಮಾನಿಸಲಾಯಿತು. ಶ್ರೀ ಸಿದ್ಧಿವಿನಾಯಕ ಚೆಸ್ ಅಕಾಡೆಮಿ ಪ್ರವರ್ತಕ ಬಾಬು ಜೆ. ಪೂಜಾರಿ ಉಪ್ಪುಂದ ಸ್ವಾಗತಿಸಿದರು. ಬೈಂದೂರು ರೋಟರಿ ಜೊತೆ ಕಾರ್ಯದರ್ಶಿ ಸುಧಾಕರ ಪಿ. ಬೈಂದೂರು ಕಾರ್ಯಕ್ರಮ ನಿರೂಪಿಸಿದರು.