ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿ ತಮಗೆ ಆಸಕ್ತಿ ಇರುವ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಮೊಬೈಲ್ ಹಾಗೂ ಟಿವಿ ಮಾಧ್ಯಮದಿಂದ ವಿದ್ಯಾರ್ಥಿಗಳಲ್ಲಿ ಕ್ರೀಡೆ ಬಗ್ಗೆ ಆಸಕ್ತಿ ಕ್ಷೀಣಿಸುತ್ತಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಅನೇಕ ಕ್ರೀಡೆಗಳು ನಶಿಸಿ ಹೋಗುವ ಸಾಧ್ಯತೆ ಇದೆ. ಆದ್ದರಿಂದ ಶಾಲಾ ಕಾಲೇಜುಗಳಲ್ಲಿ ಹೆಚ್ಚೆಚ್ಚು ಕ್ರೀಡಾ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿ ಮಕ್ಕಳನ್ನು ಈ ಕ್ಷೇತ್ರದಲ್ಲಿ ಬೆಳೆಸಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ. ಪುತ್ರನ್ ಹೇಳಿದರು.
ಅವರು ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ ಮತ್ತು ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ಜಂಟಿ ಆಶ್ರಯದಲ್ಲಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕುಂದಾಪುರ ವಲಯ ಮಟ್ಟದ ಬಾಲಕರ ಹಾಗೂ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಜಿಎಸ್‌ವಿಎಸ್ ಅಸೋಶಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಸದಸ್ಯ ಸುರೇಂದ್ರ ಖಾರ್ವಿ ಶುಭಾಶಂಸನೆಗಗೈದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ದತ್ತಾತ್ರೇಯ ನಾಯಕ್, ಸ.ವಿ.ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ., ಪ್ರೌಢಶಾಲಾ ವಿಭಾಗದ ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಲತಾ, ಶಾಲೆಯ ಶಿಕ್ಷಕ-ರಕ್ಷಕ ಸಮಿತಿಯ ಉಪಾಧ್ಯಕ್ಷ ಬಿ.ರಾಘವೇಂದ್ರ ಪೈ ಉಪಸ್ಥಿತರಿದ್ದರು.
ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್ ಸ್ವಾಗತಿಸಿದರು. ಶಾಲೆಯ ಸಂಚಾಲಕ ಎನ್.ಸದಾಶಿವ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಶಿಕ್ಷಕಿ ಸುಜಾತಾ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಶೋಭಾ ವಂದಿಸಿದರು.