ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಕಾರ್ಯಕರ್ತರು ಶ್ರಮಿಸಬೇಕು. ಪಕ್ಷ ಸಂಘಟನೆ ಹಾಗೂ ಪಕ್ಷ ಬಲವರ್ಧನೆ ಬಗ್ಗೆ ಕಾರ್ಯಕರ್ತರು ಹೆಚ್ಚಿನ ಸಮಯವನ್ನು ನೀಡಬೇಕು. ಜತೆಗೆ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿಯನ್ನು ಪ್ರತಿಯೊಂದು ಮನೆಗಳಿಗೆ ತಲುಪಿಸುವ ವ್ಯವಸ್ಥೆ ಕಾರ್ಯಕರ್ತರಿಂದ ಆಗಬೇಕು ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ. ಎಂ. ಸುಕುಮಾರ್ ಶೆಟ್ಟಿ ಹೇಳಿದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಗೋಳಿಹೊಳೆ ಮತ್ತು ಏಳಜಿತ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ಮಹಿಷಮರ್ಧಿನಿ ಸಭಾಂಗಣದಲ್ಲಿ ನಡೆದ ಬಿಜೆಪಿಯ ಗ್ರಾಮಸ್ಪಂದನ ಮತ್ತು ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಭಾರತೀಯ ಜನತಾ ಪಕ್ಷ ಕಾರ್ಯಕರ್ತರ ಪಕ್ಷವಾಗಿ ಬೆಳೆಯುತ್ತಿದೆ. ಓರ್ವ ಸಾಮಾನ್ಯ ಕಾರ್ಯಕರ್ತನೂ ಕೂಡಾ ದೇಶದ ಉನ್ನತ ಹುದ್ದೆಗೇರಲು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಡಳತ ವೈಖರಿ ಮತ್ತು ದೇಶವನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುತ್ತಿರುವ ನಿಲುವನ್ನು ಮೆಚ್ಚಿ ಯುವ ಸಮೂಹ ಭಾಜಪದ ಕಡೆಗೆ ಬರುತ್ತಿದೆ. ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರ ಮಾತಿಗೆ ಬೆಲೆಯಿಲ್ಲ. ಅಲ್ಲದೇ ಆ ಪಕ್ಷದ ನಾಯಕರ ಸ್ವಾರ್ಥ ಸಾಧನೆಯಿಂದ ಇತರರಿಗೆ ಬೆಳೆಯಲು ಸಾಧ್ಯವಿಲ್ಲ. ಯಾವುದೇ ಪಕ್ಷದಲ್ಲಿ ಸಕ್ರೀಯ ಕಾರ್ಯಕರ್ತರಿದ್ದರೆ ಮಾತ್ರ ನಾಯಕರಾಗಿ ಬೆಳೆಯಲು ಸಾಧ್ಯ ಎಂದು ಪ್ರತಿಯೊಬ್ಬ ನಾಯಕರು ತಿಳಿದುಕೊಳ್ಳಬೇಕು ಎಂದರು.
ಕ್ಷೇತ್ರಾಧ್ಯಕ್ಷ ಉಪ್ಪಿನಕುದ್ರು ಸದಾನಂದ ಅಧ್ಯಕ್ಷತೆವಹಿಸಿದ್ದರು ಸಂದರ್ಭ ನಿವೃತ್ತ ಯೋಧ ಶಾಂತಕುಮಾರ್ ಶೆಟ್ಟಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿರಿಯರಾದ ಬಸ್ರೂರು ಅಪ್ಪಣ್ಣ ಹೆಗ್ಡೆ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಬಾಲಚಂದ್ರ ಭಟ್, ಎನ್. ದೀಪಕ್‌ಕುಮಾರ್ ಶೆಟ್ಟಿ, ಜಿಪಂ ಸದಸ್ಯರಾದ ಶಂಕರ ಪೂಜಾರಿ, ಸುರೇಶ್ ಬಟ್ವಾಡಿ, ತಾಪಂ ಸದಸ್ಯ ಮಹೇಂದ್ರ ಪೂಜಾರಿ, ಶಕ್ತಿಕೇಂದ್ರದ ಅಧ್ಯಕ್ಷ ಶಿವರಾಜ್ ಪೂಜಾರಿ, ರಾಮ್‌ಕಿಶನ್ ಹೆಗ್ಡೆ, ಪಕ್ಷದ ಮುಖಂಡ ಡಾ. ಅತುಲ್ ಕುಮಾರ್ ಶೆಟ್ಟಿ, ಗಣೇಶ ಪೂಜಾರಿ ಕೆಂಚನೂರು, ರಾಘವೇಂದ್ರ ನೆಂಪು, ಮಂಜಯ್ಯ ಪೂಜಾರಿ, ರಮೇಶ ಪೂಜಾರಿ ಗಣೇಶ ಪೂಜಾರಿ ಕೆಂಚನೂರು, ವೀರಭದ್ರ ಶೆಟ್ಟಿ, ದಿವಾಕರ ಶೆಟ್ಟಿ, ಯುವಮೋರ್ಚಾ ಅಧ್ಯಕ್ಷ ಶರತ್‌ಕುಮಾರ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.