ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿಗಳಿಗೆ, ಯುವ ಜನರಿಗೆ ಅವರ ಪ್ರತಿಭೆಯ ಪ್ರದರ್ಶನಕ್ಕೆ ಸ್ಪೂರ್ತಿ ನೀಡಿದರೆ ಅವರಿಗೆ ವೇದಿಕೆಗಳಲ್ಲಿ ಅವಕಾಶ ನೀಡಿದರೆ ಅವರು ಭಾಷೆ ಹಾಗೂ ಸಮಾಜದ ಅಭಿವೃದ್ಧಿಗೆ ಶಕ್ತಿಯಾಗುತ್ತಾರೆ. ವಿದ್ಯಾರ್ಥಿಗಳಲ್ಲಿ ಇಂದು ಅಪಾರ ಪ್ರತಿಭೆ ಇದ್ದು, ಅವರಿಗೆ ಪಾಠೇತರ ಉತ್ತಮ ವಿಷಯಗಳಲ್ಲಿ ಆಸಕ್ತಿ ಮೂಡುವಂತೆ ಅವಕಾಶ ನೀಡಿದರು. ವ್ಯಕ್ತಿತ್ವ ವಿಕಸನವಾಗುತ್ತದೆ. ಅವರಿಂದ ಭಾಷೆಯ ಅಭಿವೃದ್ದಿ ಆಗುವಂತೆ ಮಾಡುವ ಪ್ರಯತ್ನ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಜೈ ಕೊಂಕಣಿ ಸಂಸ್ಥೆ ಏರ್ಪಡಿಸಿದ ಕೊಂಕಣಿ ವಿದ್ಯಾರ್ಥಿ ಸಮ್ಮೇಳನ ಪ್ರತಿಭಾ ಸಮರ್ಪಣಾ ಸಾರ್ಥಕವಾಗಿದೆ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಆರ್.ಪಿ.ನಾಯ್ಕ್ ಹೇಳಿದರು.
ಕುಂದಾಪುರದ ಸರಕಾರಿ ಪ.ಪೂ.ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ನಡೆದ ಕೊಂಕಣಿ ವಿದ್ಯಾರ್ಥಿ ಸಮ್ಮೇಳನ ಅವರು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶ್ರೇಯಾ ಎಸ್.ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಶೇಟ್ ಜ್ಯುವೆಲ್ಲರ್ ಮಾಲಕ ಬಿ.ಸುಧೀಂದ್ರ ಶೇಟ್ ಪ್ರಧಾನ ಅತಿಥಿಯಾಗಿ ಭಾಗವಹಿಸಿ ಜಾಗಟೆ ಬಾರಿಸಿದರು.
ಫ್ಯಾನ್ಸಿಟಾ ಸಮ್ಮೇಳನ ಧ್ವಜ ಹಾರಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು. ಅತಿಥಿಗಳಾಗಿ ಶ್ರದ್ಧಾ ನಾಯಕ್, ದೀಕ್ಷಾ ಆರ್.ಕಾಮತ್. ಪ್ರಮೀಳಾ ಕಾರ್ವೆಲ್ಲೋ ಭಾಗವಹಿಸಿದ್ದರು. ಯು.ಸಂಗೀತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಅರುಂಧತಿ ನಾಯಕ್ ಸ್ವಾಗತಿಸಿದರು ಯು.ಸುಷ್ಮಾ ಶೆಣೈ ಅತಿಥಿಗಳನ್ನು ಪರಿಚಯಿಸಿದರು. ಭಾರತಿ ಶೆಣೈ ವಂದಿಸಿದರು. ಸಿರಿಧಾನ್ಯ -ಅಡುಗೆ ಬಗ್ಗೆ ಮುನಿಯಾಲ್ ಗಣೇಶ್ ಶೆಣೈ ಮಾಹಿತಿ ನೀಡಿದರು. ಅಂಕ ಬೇಕೋ ಜ್ಞಾನ?, ಆರೋಗ್ಯ ಮುಖ್ಯವೋ ಐಶ್ವರ್ಯ? , ಸ್ವಚ್ಛತಾ-ಸತ್ಕಾರ್ಯ, ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಗೋಷ್ಠಿಗಳು ನಡೆದವು.
ಸಾಂಸ್ಕೃತಿಕ ಸಂಭ್ರಮದಲ್ಲಿ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಆರ್.ಎನ್.ಶೆಟ್ಟಿ ಪ.ಪೂ.ಕಾಲೇಜು, ಎಸ್.ವಿ.ಪದವಿ ಪೂರ್ವ ಕಾಲೇಜು ಗಂಗೊಳ್ಲಿ, ಸರಕಾರಿ ಪ.ಪೂ.ಕಾಲೇಜು ಕುಂದಾಪುರ, ಸೈಂಟ್ ಮೆರಿಸ್ ಕಾಲೇಜು ಕುಂದಾಪುರ, ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸರಕಾರಿ ಪ್ರೌಢ ಶಾಲೆ, ವಿ.ಕೆ.ಆರ್.ಆಚಾರ್ಯ ಪ್ರೌಢ ಶಾಲೆ, ಸರಸ್ವತಿ ವಿದ್ಯಾಲಯ ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಪ್ರತಿಭಾ ಪ್ರದರ್ಶನ ನೀಡಿದರು. ಪಿ.ಜಯವಂತ ಪೈ, ಯು,ಸುಷ್ಮಾ ಶೆಣೈ, ಉದಯ ಭಂಡಾರ್‌ಕಾರ್, ಉಮೇಶ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.