ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ, ಕನ್ನಡ ಜಾನಪದ ಪರಿಷತ್ ಬೈಂದೂರು ತಾಲೂಕು ಘಟಕ ಹಾಗೂ ಕಂಬದಕೋಣೆ ಸರಕಾರಿ ಪದವಿಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರದಂದು ಕನ್ನಡ ಜಾನಪದ ರಾಜ್ಯೋತ್ಸವ ಕಾರ್ಯಕ್ರಮ ಜರುಗಿತು.
ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ.ಗಣೇಶ್ ಗಂಗೊಳ್ಳಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ನಾಡಿನ ಕನ್ನಡ ಜಾನಪದ ಸಾಹಿತ್ಯವು ಎಲ್ಲಾ ಸಾಹಿತ್ಯಕ್ಕೆ ತಾಯಿ ಬೇರು ಇದ್ದಹಾಗೆ ಇಂಥ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ನೀಡುವ ಕೆಲಸವು ಇಂದಿನ ವಿದ್ಯಾರ್ಥಿಗಳಿಂದ ಆಗಬೇಕಿದೆ. ಆ ಕುರಿತಾಗಿ ಕನ್ನಡ ಜಾನಪದ ಪರಿಷತ್ತಿನ ರಾಜ್ಯದ್ಯಕ್ಷರಾದ ಡಾ. ಎಸ್ ಬಾಲಾಜಿ ಅವರು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಜ್ಯದ್ಯಂತ ಸಂಚರಿಸಿ ಜನಪದ ಸಾಹಿತ್ಯ ಹಾಗೂ ಜಾನಪದ ಸಂಸ್ಕೃತಿಯ ಉಳಿವಿಗೆ ಶ್ರಮಿಸುತ್ತಿದ್ದಾರೆ ಅವರ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಇಂತಹ ಕಾರ್ಯಕ್ರಮಗಳು ನಡೆಯುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಗಣಪತಿ ಅವ್ರತ ವಹಿಸಿದ್ದರು.
ಈ ವೇಳೆ ಉಪ್ಪುಂದ ಯಕ್ಷಗಾನದ ಹಿರಿಯ ಕಲಾವಿದರಾದ ಅಣ್ಣಪ್ಪ ಬಿಜೂರು ಹಾಗೂ ಪ್ರಾಂಶುಪಾಲರಾದ ಗಣಪತಿ ಅವೃತ್ ಮತ್ತು ಟಾಕೇಶ್ ಪಟಗಾರ ಅವರನ್ನು ಗೌರವಿಸಲಾಯಿತು. 10ನೇ ತರಗತಿಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಾದ ತ್ರಿಷಾ ಹಾಗೂ ಅಪೇಕ್ಷ ಅವರಿಗೆ ನಗದು ಪುರಸ್ಕಾರ ಹಾಗೂ ಅಭಿನಂದನ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಗಣಪತಿ ಅವೃತ ಹಾಗೂ ಕನ್ನಡ ಶಿಕ್ಷಕರಾದ ಟಾಕೇಶ್ ಪಟಗಾರ ಅವರನ್ನು ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ಹಾಗೂ ಬೈಂದೂರು ತಾಲೂಕು ಘಟಕದ ಪರವಾಗಿ ಗೌರವಿಸಲಾಯಿತು.
ಬೈಂದೂರು ತಾಲೂಕು ಘಟಕದ ಅಧ್ಯಕ್ಷರಾದ ಗಣೇಶ್ ದೇವಾಡಿಗ ಉಪ್ಪುಂದ ಇವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಸುಕೇಶ್ ಶೆಟ್ಟಿ ಹಾಗೂ ಉಪ ಪ್ರಾಂಶುಪಾಲರಾದ ಚಿತ್ರ ಶೆಣೈ ಉಪಸ್ಥಿತರಿದ್ದರು.
ಟಾಕೇಶ್ ಪಟಗಾರ್ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.