ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೋಟತಟ್ಟು ಗ್ರಾಮಪಂಚಾಯತ್ ಕೋಟ, ಡಾ.ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ(ರಿ.)ದ ಸಹಭಾಗಿತ್ವದಲ್ಲಿ ಕಳೆದ ಹನ್ನೆರಡು ವರುಷಗಳಿಂದ ಕಾರಂತರ ವಿವಿಧ ಆಸಕ್ತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಡಾ.ಶಿವರಾಮ ಕಾರಂತ ಹುಟ್ಟೂರ ಪುರಸ್ಕಾರ ನೀಡುತ್ತಾ ಬಂದಿದೆ.
ಈಗಾಗಲೇ ಶ್ರೀಯುತರಾದ ವೀರಪ್ಪ ಮೊಯ್ಲಿ, ವೆಂಕಟಾಚಲ , ರಾಮಕೃಷ್ಣ ಹಂದೆ, ರವಿ ಬೆಳಗೆರೆ, ಗಿರೀಶ ಕಾಸರವಳ್ಳಿ, ಜಯಶ್ರೀ, ಮೋಹನ ಆಳ್ವ, ಸಾಲುಮರದ ತಿಮ್ಮಕ್ಕ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಯಂತ ಕಾಯ್ಕಿಣಿ, ಸದಾನಂದ ಸುವರ್ಣ, ಡಾ. ಬಿ.ಎಂ. ಹೆಗ್ಡೆಯವರಿಗೆ ಪ್ರದಾನ ಮಾಡಲಾಗಿರುತ್ತದೆ.
೨೦೧೭ನೇ ಸಾಲಿನಲ್ಲಿ ಸೃಜನಶೀಲತೆ ವ್ಯಕ್ತಿತ್ವದ ಬಹುಭಾಷಾ ನಟ, ನಿರ್ಮಾಪಕ, ನಿರ್ದೇಶಕ ಪ್ರಕಾಶ ರೈ ಅವರನ್ನು ಕಾರಂತ ಹುಟ್ಟೂರ ಪುರಸ್ಕಾರಕ್ಕೆ ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ಅಕ್ಟೋಬರ್ ೧೦ ರಂದು ಡಾ.ಕೋಟ ಶಿವರಾಮ ಕಾರಂತರ ಹುಟ್ಟುಹಬ್ಬದ ದಿನ ಡಾ.ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಇವರಿಗೆ ಪ್ರದಾನ ಮಾಡಲಾಗುತ್ತದೆ.
ಕಾರಂತರಂತೆ ರಂಗಭೂಮಿ, ಚಲನಚಿತ್ರ, ಸಾಂಸ್ಕೃತಿಕ-ಸಾಹಿತ್ಯಿಕ ಚಿಂತಕ, ಬಹುಭಾಷಾ ನಟ, ನಿಷ್ಠುರ ಗುಣಗಳನ್ನು ಮೈಗೂಡಿಸಿಕೊಂಡ ವ್ಯಕ್ತಿತ್ವದವರು.
ಈ ಬಾರಿ ಕಾರಂತ ಜನ್ಮ ದಿನೋತ್ಸವದ ಅಂಗವಾಗಿ ಅಕ್ಟೋಬರ್ ಒಂದರಿಂದ ಹತ್ತರವರೆಗೆ ಹತ್ತು ದಿನಗಳ ಸಾಂಸ್ಕೃತಿಕ -ಸಾಹಿತ್ಯಿಕ ಸುಗ್ಗಿ “ತಂಬೆಲರು-೨೦೧೭”ನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಸಮ್ಮೇಳನ, ನಾಟಕ, ಆರೋಗ್ಯ ಮೇಳ, ಶತಕವಿ ಸಮ್ಮೇಳನ, ಚಿಣ್ಣರ ಹಬ್ಬ, ವಿಚಾರಗೋಷ್ಠಿ, ಚಲನಚಿತ್ರ ಪ್ರದರ್ಶನ, ತೆಂಕು ಬಡಗಿನ ಯಕ್ಷ-ಗಾನ-ನೃತ್ಯ ವೈಭವ ಮೊದಲಾದ ಕಾರ್ಯಕ್ರಮಗಳನ್ನು ಡಾ.ಶಿವರಾಮ ಕಾರಂತ ಥೀಂ ಪಾರ್ಕ್‌ನ್ಲಲಿ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಕಾರಂತ ಪ್ರತಿಷ್ಠಾನದ ಅಧ್ಯಕ್ಷ ಆನಂದ ಸಿ.ಕುಂದರ್ ಹೇಳಿದರು.
ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಚ್.ಪ್ರಮೋದ್ ಹಂದೆ, ಅಧ್ಯಕ್ಷರು ಗ್ರಾಮ ಪಂಚಾಯತ್ ಕೋಟತಟ್ಟು, ಅಶ್ವಥ್ ಆಚಾರ್ಯ, ಮಾಧ್ಯಮ ವಕ್ತಾರ, ಡಾ.ಕಾರಂತ ಪ್ರತಿಷ್ಠಾನ(ರಿ.) ಕೋಟ, ಯು.ಎಸ್.ಶೆಣೈ, ಆಯ್ಕೆ ಸಮಿತಿಯ ಸದಸ್ಯರು, ಸುಬ್ರಾಯ ಆಚಾರ್ಯ, ಟ್ರಸ್ಟಿಗಳು ಕಾರಂತ ಪ್ರತಿಷ್ಠಾನ(ರಿ) ಕೋಟ, ಭಾಗವಹಿಸಿ ವಿವಿಧ ಮಾಹಿತಿ ನೀಡಿದರು.