ಕುಂದಾಪ್ರ ಡಾಟ್ ಕಾಂ ಸುದ್ದಿ,
ಕುಂದಾಪುರ: ಮನುಷ್ಯನ ಅಂಗಾಂಗಳಲ್ಲಿ ಕಣ್ಣು ಚಿಕ್ಕದಾಗಿದ್ದರೂ ಕೂಡ ಐದು ಬಗೆಯ ಖಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಕಣ್ಣಿನ ಸಂಬಂಧಿ ಖಾಯಿಲೆಯಲ್ಲಿ ನಾಲ್ಕು ಪ್ರಕಾರವನ್ನು ಗುಣಪಡಿಸಲಾಗಿದ್ದರೂ ಮುಂದಾಗುವ ಹಾನಿಯನ್ನು ನಿಯಂತ್ರಿಸಬಹುದಷ್ಟೇ. ಆದರೆ ಕಣ್ಣಿನ ಪೊರೆ ಸಮಸ್ಯೆಯನ್ನು ಸಂಪೂರ್ಣವಾಗಿ ಹೋಗಲಾಡಿಸುವ ಚಿಕಿತ್ಸೆಗಳು ಲಭ್ಯವಿದ್ದು, ವಯಸ್ಸಾದಂತೆ ದೃಷ್ಟಿ ಮಂಜಾಗದಂತೆ ನೋಡಿಕೊಳ್ಳಬಹುದಾಗಿದೆ ಎಂದು ಪಾರ್ವತಿ ಮಹಾಬಲ ಶೆಟ್ಟಿ, ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜಯರಾಮ ಶೆಟ್ಟಿ ಹೇಳಿದರು.
ಅವರು ರೋಟರಿ ಕ್ಲಬ್ ಬೈಂದೂರು, ಇನ್ನರ್‌ವ್ಹೀಲ್ ಕ್ಲಬ್ ಬೈಂದೂರು, ಹಿಂದೂ ಅಭ್ಯುದಯ ಸಂಘ ರಿ. ನಾವುಂದ, ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮತ್ತು ಕಣ್ಣಿನ ಆಸ್ಪತ್ರೆ ಶಿರೂರು-ಮುದ್ದುಮನೆ, ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ ಉಡುಪಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಿ. ಸಂಯುಕ್ತಾಶ್ರಯದಲ್ಲಿ ನಾವುಂದ ಶ್ರೀ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಜರುಗಿದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ದೀಪ ಬೆಳಗಿ ಚಾಲನೆ ನೀಡಿ ಮಾತನಾಡಿದರು.
ಕಣ್ಣಿನ ಮಸೂರ ಬೇರೆ ಬೇರೆ ಕಾರಣಗಳಿಂದ ಮಂಜಾಗುತ್ತಾ ಬಂದು ಕ್ರಮೇಣ ಕಣ್ಣಿನ ದೃಷ್ಟಿ ಮಂದವಾಗುತ್ತಾ ಬರುತ್ತದೆ. ಇದನ್ನು ಹೊಲಿಗೆ ರಹಿತ ಅಂತರ್ ಚಕ್ಷು ಮಸೂರ ಅಳವಡಿಸಿಕೊಳ್ಳುವುದರ ಮೂಲಕ ಗುಣಪಡಿಸಿಕೊಳ್ಳಬಹುದಾಗಿದ್ದು ಎಂದ ಅವರು ಹೇಳಿದರು.
ಬೈಂದೂರು ರೋಟರಿ ಅಧ್ಯಕ್ಷ ಹುಂಚನಿ ಕೃಷ್ಣಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ವಲಯ ಸೇನಾನಿ ಜಯಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ ಡಾ. ಪ್ರವೀಣ್ ಶೆಟ್ಟಿ, ಬೈಂದೂರು ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷ ಶಾಂತಿ ಪಿರೇರಾ ಉಪಸ್ಥಿತರಿದ್ದರು.
ನಾವುಂದ ಹಿಂದೂ ಅಭ್ಯುದಯ ಸಂಘದ ಅಧ್ಯಕ್ಷ ಶಶಿಧರ ಎಂ. ಶೆಟ್ಟಿ ಸ್ವಾಗತಿಸಿದರು. ರೋಟರಿ ಸದಸ್ಯ ಮಂಜುನಾಥ ಮಹಲೆ ವಂದಿಸಿದರು. ಶಿಕ್ಷಕ ಶಿವರಾಮ ಭಟ್ ಕಾರ್ಯಕ್ರಮ ನಿರೂಪಿಸಿದರು.