ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಲು ಹಾಗೂ ಮಕ್ಕಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಆಯೋಜಿಸಲಾಗುತ್ತಿರುವ ಮುದ್ದು ಕೃಷ್ಣ ಸ್ಪರ್ಧೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಈ ಕಾರ್ಯಕ್ರಮದ ಮೂಲಕ ಅನೇಕ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ವೇದಿಕೆ ದೊರೆತಂತಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು ಮತ್ತು ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕಾರ್ಯ ನಡೆಸಬೇಕು ಎಂದು ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿ ಸದಸ್ಯ ಜಿ.ವೆಂಕಟೇಶ ನಾಯಕ್ ಹೇಳಿದರು.
ಅವರು ಪೇಜಾವರ ಶ್ರೀ ಅಧೋಕ್ಷಜ ಮಠ ಶ್ರೀ ಕೃಷ್ಣ ಮಠ ಉಡುಪಿ ಮತ್ತು ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಜಂಟಿ ಆಶ್ರಯದಲ್ಲಿ ಶಾಲೆಯ ಟಿ.ವಿಮಲಾ ವಿ.ಪೈ ಸಭಾಂಗಣದಲ್ಲಿ ಜರಗಿದ ಮುದ್ದು ಕೃಷ್ಣ ಸ್ಪರ್ಧೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಲೆಯ ಶಿಕ್ಷಕ-ರಕ್ಷಕ ಸಮಿತಿ ಕಾರ್ಯದರ್ಶಿ ಬಿ.ಪ್ರಕಾಶ ಶೆಣೈ, ಸಮಿತಿಯ ಸದಸ್ಯ ರಾಘವೇಂದ್ರ ದೇವಾಡಿಗ ಶುಭ ಹಾರೈಸಿದರು. ಕೀರ್ತನಾ ಎಸ್.ನಾಯಕ್, ಸವಿತಾ ಯು.ದೇವಾಡಿಗ, ಜ್ಯೋತಿ ಕೃಷ್ಣ ತೀರ್ಪುಗಾರರಾಗಿ ಸಹಕರಿಸಿದರು. ಸಹಶಿಕ್ಷಕರಾದ ಎನ್.ಸುಭಾಶ್ಚಂದ್ರ ನಾಯಕ್, ಜಿ.ವಿಶ್ವನಾಥ ಭಟ್, ನಾರಾಯಣ ಉಪಾಧ್ಯಾಯ, ರೇಖಾ ಖಾರ್ವಿ, ರೇಣುಕಾ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಶಿಕ್ಷಕಿ ಸುಮನಾ ಪಡಿಯಾರ್ ಸ್ವಾಗತಿಸಿದರು. ಸಹಶಿಕ್ಷಕ ನಾಗರಾಜ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ ಶೆಟ್ಟಿ ವಂದಿಸಿದರು.