ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಶಾಸ್ತ್ರಿ ವೃತ್ತದಲ್ಲಿ ಕುಂದಾಪುರ ಪೊಲೀಸ್ ಠಾಣಾಧಿಕಾರಿ ನಾಸೀರ್ ಹುಸೇನ್ ಅವರ ವಿರುದ್ಧ ಹಿಂದೂ ಜಾಗರಣಾ ವೇದಿಕೆ ಸೇರಿದಂತೆ ಪರಿವಾರ ಸಂಘಟನೆಗಳು ಆಯೋಜಿಸಿದ್ದ ಪ್ರತಿಭಟನೆಗೆ ಪೊಲೀಸರು ತಡೆಯೊಡ್ಡಿದ್ದು, ಪೂರ್ವನುಮತಿಯಿಲ್ಲದೇ ಪ್ರತಿಭಟನೆಗೆ ಮಾಡುತ್ತಿದ್ದಾರೆಂಬ ಕಾರಣವೊಡ್ಡಿ ಪ್ರತಿಭಟನೆಗೆ ಮುಂದಾದ ಮುಖಂಡರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದ ಘಟನೆ ನಡೆಯಿತು.
[quote bgcolor=”#ffffff” arrow=”yes” align=”right”]ಪ್ರಕರಣದ ಹಿನ್ನೆಲೆ ಏನು?
ಉಡುಪಿಯ ಕಾಲೇಜೊಂದರಲ್ಲಿ ಓದುತ್ತಿರುವ ಕಾಪು ಮೂಲದ ಅನ್ಯಕೋಮಿನ ಮೂವರು ಯುವತಿಯರು ಹಾಗೂ ಇಬ್ಬರು ಯುವಕರು ಕಾರಿನಲ್ಲಿ ಬೈಂದೂರಿಗೆ ತೆರಳಿ ಅಲ್ಲಿಂದ ಮರವಂತೆಗೆ ಬಂದಿದ್ದರು. ಮರವಂತೆ ಬೀಚ್ ಬಳಿ ವಿದ್ಯಾರ್ಥಿಗಳ ವರ್ತನೆಯನ್ನು ಗಮನಿಸುತ್ತಿದ್ದ ಸಂಘಟನೆ ಕಾರ‍್ಯಕರ್ತರು, ಅವರು ಕಾರಿನಲ್ಲಿ ಹಿಂದಿರುಗುತ್ತಿದ್ದಾಗ ಹಿಂಬಾಲಿಸಿ ಕೋಟೇಶ್ವರ ಸಂಘಟನೆಗೆ ಮಾಹಿತಿ ನೀಡಿದ್ದರು. ಕೋಟೇಶ್ವರದಲ್ಲಿ ಕಾರ್ಯಕರ್ತರು ಕಾರನ್ನು ಅಡ್ಡಗಟ್ಟಿ ಪೊಲೀಸರಿಗೆ ಒಪ್ಪಿಸಿದ್ದರು. ವಿಚಾರಣೆ ಬಳಿಕ ವಿದ್ಯಾರ್ಥಿಗಳ ತಪ್ಪಿಲ್ಲ ಎಂದು ಪೊಲೀಸರು ತಿಳಿಸಿದಾಗ, ಸಂಘಟನೆಯ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಸಂದರ್ಭ ಠಾಣಾಧಿಕಾರಿ ಅವ್ಯಾಚವಾಗಿ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿದ ಬಗ್ಗೆ ಆರೋಪಿಸಿದ್ದ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಗೆ ಕರೆ ನೀಡಲಾಗುತ್ತು. ಈ ನಡುವೆ ಹದಿನೈದು ಮಂದಿ ಕಾರ್ಯಕರ್ತರ ಮೆಲೆಯೂ ಮುಂಜಾಗೃತಾ ಕ್ರಮವಾಗಿ 107 ಕೇಸು ದಾಖಲಿಸಲಾಗಿತ್ತು.[/quote]
ಅನುಮತಿ ಇಲ್ಲದೆ ಪ್ರತಿಭಟನೆಗೆ ಮುಂದಾಗುವ ಬಗ್ಗೆ ಪೊಲೀಸ್ ಬಿಗು ಬಂದೋಸಬಸ್ತ್ ಏರ್ಪಡಿಸಿದ್ದರು. ಎಸ್ಪಿ ಡಾ. ಸಂಜೀವ ಪಾಟೀಲ್ ಕೂಡಾ ಕುಂದಾಪುರಕ್ಕೆ ಆಗಮಿಸಿದ್ದರು. ಸಿಪಿಐ ಮಂಜಪ್ಪ, ಠಾಣಾಧಿಕಾರಿ ನಾಸೀರ್ ಹುಸೇನ್ ನೇತೃತ್ವದಲ್ಲಿ ಕೆಎಸ್‌ಆರ್‌ಪಿ, ಡಿಎಆರ್ ತುಕಡಿ ಹಾಗೂ ನೂರಾರು ಸಿಬ್ಬಂದಿ ನೇಮಕ ಮಾಡಲಾಗಿತ್ತು. ಶಾಸ್ತ್ರಿ ವೃತ್ತದ ಆಸುಪಾಸು ನಿಂತಿದ್ದವರನ್ನೂ, ಹಾಗೂ ಕಾಲೇಜ್ ವಿದ್ಯಾರ್ಥಿಗಳನ್ನು ಕೂಡಾ ಬಿಡದೆ ಪೊಲೀಸರು ಚದುರಿಸಿದರು. ಈ ಸಂದರ್ಭ ಬಿಜೆಪಿ ಮುಖಂಡರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ವಶಕ್ಕೆ ಪಡೆದವರನ್ನು ಬಿಡಗಡೆ ಮಾಡುವ ಆಶ್ವಾಸನೆ ನೀಡಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಶಾಂತವಾಯಿತು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಪೊಲೀಸರ ಕೇಸುಗಳಿಗೆ ಹಿಂದೂ ಸಂಘಟನೆ ಜಗ್ಗುವುದಿಲ್ಲ:
ಪೊಲೀಸ್ ಇಲಾಖೆ ಕಾಂಗ್ರೆಸ್ ಪಕ್ಷದ ಕಪಿಮುಷ್ಟಿಯಲ್ಲಿದ್ದು, ಹಿಂದೂ ವಿರೋಧಿಯಂತೆ ವರ್ತಿಸುತ್ತಿದೆ. ಹಿಂದೂ ಸಂಘಟನೆ ವಿರುದ್ಧ ಎಷ್ಟೇ ಕೇಸ್ ದಾಖಲಿಸಿದರೂ ನಾವು ಜಗ್ಗುವುದಿಲ್ಲ ಎಂದು ದ.ಕ ಜಿಲ್ಲೆ ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ ಮಾಜಿ ಉಪಾಧ್ಯಕ್ಷ ಫ್ರಾಂಕ್ಲಿನ್ ಹೇಳಿದರು. ಬಂಟ್ವಾಳ ಶರತ್ ಮಡಿವಾಳ ಶವ ಯಾತ್ರೆ ಸಂದರ್ಭದಲ್ಲೂ ಕಿಡಿಗೇಡಿಗಳು ದಾಂದಲೆ ನಡೆಸಿ, ಹಿಂದೂ ಸಂಘಟನೆ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದರು. ಕುಂದಾಪುರದಲ್ಲಿ ಅನ್ಯ ಕೋಮಿನ ಕಾಲೇಜು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದೆ ಪೊಲೀಸರಿಗೆ ಒಪ್ಪಿಸದರೂ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ನಮಗೆ ಜೈಲು, ಕೇಸ್ ಹೊಸದಲ್ಲ. ಪೊಲೀಸ್ ಪೋರ್ಸ್ ಮೂಲಕ ನಮ್ಮ ಕಾರ‍್ಯಕರ್ತರ ಕಟ್ಟಿಹಾಕಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಕೋಟೇಶ್ವರಕ್ಕೆ ಖಂಡನಾ ಸಭೆ:
ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ಪ್ರತಿಭಟನೆ ಪೊಲೀಸರು ತಡೆಯೊಡ್ಡಿದ ಬಳಿಕ ಕೋಟೇಶ್ವರದಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಖಂಡನಾ ಸಭೆ ಜರುಗಿತು. ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಒಂದು ವಾರದಲ್ಲಿ ತನಿಖೆ ನಡೆಸುವ ಭರವಸೆ ನೀಡಿದ್ದು, ಪ್ರತಿಭಟನೆ ಹಿಂದಕ್ಕೆ ಪಡೆಯಲಾಗಿದೆ. ನ್ಯಾಯ ಸಿಗದಿದ್ದರೆ ಮತ್ತೆ ಹೋರಾಟ ನಿಶ್ಚಿತ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. 500ಕ್ಕೂ ಹೆಚ್ಚಿನ ಕಾರ‍್ಯಕರ್ತರು ಖಂಡನಾ ಸಭೆಯಲ್ಲಿ ಭಾಗವಹಿಸಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಘಟನೆಯ ಬಗ್ಗೆ ಎಸ್ಪಿ ಡಾ. ಸಂಜೀವ ಎಂ.ಪಾಟೀಲ್ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಕೊನೆ ಕ್ಷಣದಲ್ಲಿ ಪ್ರತಿಭಟನೆಗೆ ಅನುಮತಿ ಕೇಳಿದ್ದು, ಇಲಾಖೆಯ ಆಂತರಿಕ ಕಾರಣ, ಬಂದೋವಸ್ತ್ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಅವಕಾಶ ನೀಡಿಲ್ಲ. ಪ್ರತಿಭಟನೆ ಹತ್ತಿಕ್ಕುವ ಉದ್ದೇಶ ಪೊಲೀಸ್ ಇಲಾಖೆಗೆ ಇಲ್ಲ. ಸಂಘಟನೆಗಳು ಮಾಡಿದ ಆರೋಪದ ಬಗ್ಗೆ ತನಿಖೆ ಮಾಡಲಾಗುತ್ತದೆ ಎಂದರು.