ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕನ್ನಡ ಸಾಹಿತ್ಯ ಕ್ಷೇತ್ರ ಕಂಡ ಅಪರೂಪದ ಕವಿ ಗೋಪಾಲಕೃಷ್ಣ ಅಡಿಗರು, ನವೋದಯದ ಅಲೆಯಲ್ಲಿ ತೇಲುತ್ತಿದ್ದ ಅಂದಿನ ಸಾಹಿತ್ಯ ಲೋಕದಲ್ಲಿ ನವ್ಯವೆಂಬ ಮಿಂಚನ್ನು ಹರಿಸಿದವರು. ರಮ್ಯ ಸಾಹಿತ್ಯದಿಂದ ವಾಸ್ತವದ ತಳಹದಿಯಲ್ಲಿ ಕೃತಿ ರಚಿಸುವ ಮನೋಭೂಮಿಕೆಯೆಡೆಗೆ ಸಾಹಿತಿಗಳನ್ನು ಸೆಳದದ್ದು ಅವರ ಹೆಚ್ಚುಗಾರಿಕೆಯೇ ಸರಿ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪುಂದ ಇವರ ಸಹಯೋಗದಲ್ಲಿ ನಡೆದ ಅಡಿಗರ ಜನ್ಮಶತಾಬ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಹುಟ್ಟಿ, ಶಿಕ್ಷಣ ಪಡೆದು ಇಂಗ್ಲೀಷ್ ಉಪನ್ಯಾಸಕರಾದರೂ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ ಅಡಿಗರು ಇಂದಿಗೂ ಪ್ರಸ್ತುತ. ಅವರ ತತ್ವ, ಸಿದ್ಧಾಂತಗಳು ಅನುಕರಣೀಯವಾದುವುಗಳು. ಪ್ರಭುತ್ವಕ್ಕೆ ಸೆಡ್ಡು ಹೊಡೆದು ನಿಂತು, ವ್ಯವಸ್ಥೆಯ ನ್ಯೂನ್ಯತೆಗಳನ್ನು ಎತ್ತಿ ತೋರಿಸುವಂತಹ ಧೈರ್ಯ ಅವರಿಗಿತ್ತು. ಅಡಿಗರ ಒಂದೊಂದು ಕವನವು ಕ್ರಾಂತಿಗೀತೆಯಂತಿವೆ ಎಂದರು.
ಉಪ್ಪುಂದ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಶ್ರೀಧರ ಐತಾಳ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಗಾಯಕ ಚಂದ್ರಶೇಖರ ಕೆದ್ಲಾಯ, ವಿಶ್ರಾಂತ ಪ್ರಾಧ್ಯಾಪಕ ಸಿ. ಉಪೇಂದ್ರ ಸೋಮಯಾಜಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸೂರಾಲು ನಾರಾಯಣ ಮಡಿ ಉಪಸ್ಥಿತರಿದ್ದರು. ಉಪನ್ಯಾಸಕ ರವಿ ನಾಯ್ಕ್ ಅವರು ಪ್ರಸ್ತಾವಿಕವಾಗಿ ಮಾತನಾಡಿದರು, ಉಪನ್ಯಾಸಕಿ ವನಿತಾ ನಾಯ್ಕ್ ಸ್ವಾಗತಿಸಿ, ಅಮೃತಾ ಬಾನಾವಳಿಕರ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ವಿಶ್ವನಾಥ ವಂದಿಸಿದರು.