ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪರಂಪರೆಯಿಂದ ಬಂದದ್ದೆಲ್ಲ ಶ್ರೇಷ್ಠ ಎನ್ನುವುದನ್ನು ಒಪ್ಪದೇ, ಒಳಿತು ಕೆಡುಕುಗಳನ್ನು ವಿಮರ್ಷಿಸಿ ಕಾಲಕ್ಕೆ ತಕ್ಕಂತೆ ಮಾರ್ಪಾಡುಗೊಳಿಸಿದ ಬಳಿಕವಷ್ಟೇ ಒಪ್ಪುತ್ತಿದ್ದ ವ್ಯಕ್ತಿತ್ವ ಕವಿ ಗೋಪಾಲಕೃಷ್ಣ ಅಡಿಗರದ್ದಾಗಿತ್ತು. ಕಾಲದ ವಾಸ್ತವಗಳನ್ನು ಅವರ ಕಾವ್ಯದ ಮೂಲಕವೂ ಕಟುಮಾತಿನಲ್ಲಿ ವಿಮರ್ಶಿಸಿದ್ದರು. ಹೇಳಬೇಕಿರುವುದನ್ನು ತೀಕ್ಷವಾಗಿ ಹೇಳುವ ಧೈರ್ಯ ಅವರಲ್ಲಿತ್ತು ಎಂದು ವಿಶ್ರಾಂತ ಪ್ರಾಂಶುಪಾಲ ವಿಮರ್ಶಕ, ಮುರಳೀಧರ ಉಪಾಧ್ಯ ಹಿರಿಯಡಕ ಹೇಳಿದರು.
ಅವರು ಉಪ್ಪುಂದದ ಸುವಿಚಾರ ಬಳಗ ಮತ್ತು ಕುಂದ ಅಧ್ಯಯನ ಕೇಂದ್ರ ಸಿರಿಮೊಗೇರಿ ಸಮಷ್ಟಿ ವೇದಿಕೆಯ ಸಹಕಾರದೊಂದಿಗೆ ಗುರುವಾರ ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಎಂ. ಗೋಪಾಲಕೃಷ್ಣ ಅಡಿಗ ಜನ್ಮಶತಾಬ್ದಿ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಯು. ಚಂದ್ರಶೇಖರ ಹೊಳ್ಳರು ಬರೆದ ‘ಅಡಿಗರ ವಿಶಿಷ್ಟತೆ-ಒಂದು ಅಧ್ಯಯನ’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಇತಿಹಾಸದ ವೈಭವೀಕರಣವನ್ನು ಗೇಲಿ ಮಾಡಿದ ಅಡಿಗರು ಪರಂಪರೆ ಮತ್ತು ಆಧುನಿಕತೆಯ ಸಂಘರ್ಷದ ಸಂಕೀರ್ಣ ಚಿತ್ರಗಳನ್ನು ತಮ್ಮ ಕಾವ್ಯದಲ್ಲಿ ನೀಡಿದರು. ‘ಚಲನವೇ ಬದುಕು-ನಿಶ್ಚಲವೇ ಮರಣ’ ಎನ್ನುವುದು ಅಡಿಗರ ಕಾಣ್ಕೆ ಎಂದು ಅವರು ಹೇಳಿದರು.
ಸಪ್ತಾಹವನ್ನು ಉದ್ಘಾಟಿಸಿದ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ವಿದ್ಯಾರ್ಥಿಗಳು ಓದು, ಅಂಕಗಳಿಗೆ ಮಾತ್ರ ಅಂಟಿಕೊಳ್ಳದೆ ಸಾಹಿತ್ಯದ ಅಧ್ಯಯನದ ಮೂಲಕ ಬೌದ್ಧಿಕ ಬೆಳವಣಿಗೆಗೆ ಒತ್ತು ನೀಡಬೇಕು. ಕೆರಳಿಸುವ ಸಾಹಿತ್ಯವನ್ನು ದೂರವಿರಿಸಿ, ಅರಳಿಸುವ ಸಾಹಿತ್ಯ ಓದಬೇಕು ಎಂದರು.
ಪ್ರಾಂಶುಪಾಲ ಬಿ. ಎ. ಮೇಳಿ ಅಧ್ಯಕ್ಷತೆ ವಹಿಸಿದ್ದರು. ಮುರಳೀಧರ ಉಪಾಧ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರಾಧ್ಯಾಪಕ ನಾಗರಾಜ ಶೆಟ್ಟಿ ಸ್ವಾಗತಿಸಿದರು. ಸಿರಿಮೊಗೇರಿ ಸಮಷ್ಟಿ ವೇದಿಕೆಯ ಎಂ. ಜಯರಾಮ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ನವೀನ್ ಪರಿಚಯಿಸಿದರು. ಸುವಿಚಾರ ಬಳಗದ ಸಂಚಾಲಕ ವಿ. ಎಚ್. ನಾಯಕ್ ವಂದಿಸಿದರು. ಕನ್ನಡ ವಿಭಾಗದ ಸತೀಶ್ ಎಂ. ನಿರೂಪಿಸಿದರು. ವಿದ್ಯಾರ್ಥಿಗಳಾದ ಪಲ್ಲವಿ, ಸಂಪ್ರೀತಾ, ದಿನೇಶ್, ಲೋಕೇಶ್, ಮೇಘನಾ ಅಡಿಗರ ಕವನಗಳನ್ನು ಓದಿದರು.