ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಸಾರ್ವಜನಿಕ ಆಭಾರಿ ಸಮಿತಿ ಹಾಗೂ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಗಳ ಸಹಕಾರದೊಂದಿಗೆ ನೂತನ ನಿರ್ಮಾಣದ ಓಲಗ ಮಂಟಪವನ್ನು ಧಾರ್ಮಿಕ ವಿಧಿಗಳ ಮೂಲಕ ಶ್ರೀದೇವರಿಗೆ ಅರ್ಪಿಸಲಾಯಿತು.
ಈ ಪ್ರಯುಕ್ತ ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದೇವಳದ ತಂತ್ರಿ ಕೆ. ಮಂಜುನಾಥ ಅಡಿಗ ಆಶೀರ್ವಚನ ನೀಡಿ, ನಮ್ಮ ಉತ್ತಮ ಕಾರ್ಯಗಳಿಗೆ ದೈವ ಪ್ರೇರಣೆಯೇ ಬಲ ನೀಡುತ್ತದೆ. ದೇವರ ಮೇಲೆ ನಿರಂತರವಾಗಿ ಭಕ್ತಿಯನ್ನಿಟ್ಟು ನಿತ್ಯ ನಿರಂತರ ಭಜನೆ ಆರಾಧನೆ ಮಾಡುವುದರಿಂದ ನಮ್ಮ ಜೀವನ ಪಾವನಗೊಳ್ಳಲು ಸಹಕಾರಿಯಾಗುತ್ತದೆ ನಮ್ಮ ಗುರು-ಹಿರಿಯರಿಂದ ಪರಂಪರಾನುಗತವಾಗಿ ಬಂದಿರುವ ಸಂಸ್ಕಾರವನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು. ದೇವಾಲಯಗಳಲ್ಲಿ ಸಂಸ್ಕೃತಿ, ಸಮಾನತೆ, ಸಾಮರಸ್ಯ, ಸಭ್ಯತೆ ಉಳಿಯಬೇಕಾದರೆ ಧಾರ್ಮಿಕ ಆಚರಣೆಯಲ್ಲಿ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು ಎಂದರು.
ಮಾನವ ಶರೀರವೇ ಒಂದು ದೇಗುಲವಿದ್ದಂತೆ. ಆದರೆ ನಮ್ಮ ಕಾಲಿನಿಂದ ಶಿರದವರೆಗಿನ ನಿದ್ರಾವಸ್ಥೆಯಲ್ಲಿರುವ ಕುಂಡಲಿಶಕ್ತಿಗಳನ್ನು ಜಾಗೃತಗೊಳಿಸಲು ದೇವಸ್ಥಾನಕ್ಕೆ ಹೋಗಲೇಬೇಕು. ಅಲ್ಲದೇ ಯಾರಲ್ಲಿಯೂ ಹೇಳಿಕೊಳ್ಳಲಾಗದ ಕೆಲವು ಸಂಗತಿಗಳು ಮತ್ತು ಮನಸ್ಸಿನ ತೊಳಲಾಟ ಬಗೆಹರಿಸಿಕೊಳ್ಳಲು ದೇವಸ್ಥಾನ ಉತ್ತಮ ಕೇಂದ್ರವಾಗಿದೆ. ಅಲ್ಲಿನ ಅರ್ಚಕರೂ ಕೂಡಾ ಧಾರ್ಮಿಕ ಅನುಷ್ಟಾನವನ್ನು ಅಕ್ಷರಷಃ ಪಾಲಿಸಿಕೊಂಡು ಅರ್ಪಣಾ ಮನೋಭಾವದಿಂದ ಪೂಜಾ ಕೈಂಕರ್ಯ ಮಾಡುವುದರಿಂದ ದೇವರ ಶಕ್ತಿಯೂ ವರ್ಧಿಸುತ್ತದೆ ಎಂದರು.
ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆವಹಿಸಿದ್ದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಧಾರ್ಮಿಕ ಸಭಾ ಉದ್ಘಾಟಿಸಿದರು. ಈ ಸಂದರ್ಭ ಶ್ರೀದೇವಿಯ ಸುಪ್ರಭಾತ, ಭಕ್ತಿಗೀತೆಗಳನ್ನೊಳಗೊಂಡ ಧ್ವನಿಮುದ್ರಿಕೆ (ಸಿಡಿ)ಯನ್ನು ಶಾಸಕರು ಬಿಡುಗಡೆ ಮಾಡಿದರು.
ಗ್ರಾಪಂ ಅಧ್ಯಕ್ಷೆ ದುರ್ಗಮ್ಮ, ಜಿಪಂ ಸದಸ್ಯರಾದ ಸುರೇಶ ಬಟ್ವಾಡಿ, ಗೌರಿ ದೇವಾಡಿಗ, ತಾಪಂ ಸದಸ್ಯೆ ಪ್ರಮೀಳಾ ದೇವಾಡಿಗ, ಗ್ರಾಪಂ ಸದಸ್ಯರಾದ ನಾಗಮ್ಮ ದೇವಾಡಿಗ, ಸೀತು ದೇವಾಡಿಗ ಕಾರ್ಯನಿರ್ವಹಣಾಧಿಕಾರಿ ಬಿ. ಅಣ್ಣಪ್ಪ, ವಿವಿಧ ಕ್ಷೇತ್ರದ ಮುಖ್ಯಸ್ಥರಾದ ಯು. ಗೋಪಾಲ ಶೆಟ್ಟಿ, ಅರೆಹಾಡಿ ಮಂಜು ದೇವಾಡಿಗ, ರಮೇಶ ವೈದ್ಯ, ಜಿ. ಗೋಕುಲ್ ಶೆಟ್ಟಿ, ದೀಟಿ ಸೀತಾರಾಮ ಮಯ್ಯ, ರಾಮ ದೇವಾಡಿಗ ಉಪಸ್ಥಿತರಿದ್ದರು. ಗಣಪಯ್ಯ ಗಾಣಿಗ ಸ್ವಾಗತಿಸಿ, ಸಂದೇಶ ಭಟ್ ವಂದಿಸಿದರು.