ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಷ್ಟ್ರೀಕೃತ ಬ್ಯಾಂಕುಗಳಂತೆ ಆಧುನಿಕ ವ್ಯವಸ್ಥೆಗಳನ್ನು ಅಳವಡಿಸಿಕೊಂಡು ಸಕಾಲದಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ಕೊಡುವ ಉದ್ದೇಶದಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆರಂಭಗೊಂಡ ಸಹಕಾರಿ ಸಂಘಗಳು ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚಿನ ಸೌಲಭ್ಯಗಳ ಜತೆಗೆ ಬ್ಯಾಂಕಿಂಗ್ ಸೇವೆ ನೀಡುತ್ತಿದೆ ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ನಾವುಂದದಿಂದ ಕುಂದಾಪುರ ಶಾಸ್ತ್ರಿಸರ್ಕಲ್ ಬಳಿಯ ಗೋವಿಂದ್ರಾಯ ಕಾಂಪ್ಲೆಕ್ಸ್‌ಗೆ ಸ್ಥಳಾಂತರಗೊಂಡ ಗೋಪಾಲಕೃಷ್ಣ ವಿವಿಧೋದ್ಧೇಶ ಸೇವಾ ಸಹಕಾರಿ ಸಂಘದ ನೂತನ ಪ್ರಧಾನ ಕಛೇರಿ ಉದ್ಘಾಟಿಸಿ ಮಾತನಾಡಿದರು. ಸೇವೆಗೆ ಇನ್ನೊಂದು ಹೆಸರು ಸಹಕಾರಿಯಾಗಿದ್ದು, ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿನ ಜನರಿಗೆ, ಕೃಷಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಭಾಗದ ಸಹಕಾರಿ ಸಂಸ್ಥೆಗಳು ಆರ್ಥಿಕ ಹಾಗೂ ಸಾಮಾಜಿಕವಾಗಿ ತೊಡಗಿಸಿಕೊಂಡಿದೆ. ಎಲ್ಲಾ ವರ್ಗದ ಜನರನ್ನು ಉತ್ತಮ ರೀತಿಯಲ್ಲಿ ಸ್ಪಂದಿಸುವ ಜತೆಗೆ ಉದ್ಯೋಗಾವಕಾಶಗಳು ಕೂಡಾ ಹೆಚ್ಚಲು ಸಹಕಾರಿಯಾಗುತ್ತಿದೆ. ಕೇವಲ ಲಾಭದ ದೃಷ್ಠಿಗಿಂತ ಮುಖ್ಯವಾಗಿ ಸಹಕಾರಿ ತತ್ವಗಳನ್ನು ಅಳವಡಿಸಿಕೊಂಡು ಸೇವೆಗೆ ಹೆಚ್ಚು ಮಹತ್ವ ಕೊಡುವುದರ ಮೂಲಕ ಜನರ ಸ್ವಾವಲಂಬಿ ಬದುಕಿಗೆ ಅನೇಕ ರೀತಿಯಲ್ಲಿ ಸಹಕಾರ ನೀಡುತ್ತಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಭದ್ರತಾ ಕೊಠಡಿ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಕೆ. ರಮೇಶ ಗಾಣಿಗ ಕೊಲ್ಲೂರು, ಉಪಾಧ್ಯಕ್ಷ ಸುಧೀರ್ ಪಂಡಿತ್ ಕುಂಭಾಶಿ, ಪ್ರಧಾನ ವ್ಯವಸ್ಥಾಪಕ ನಾಗರಾಜ ಗಾಣಿಗ ಹಿಲ್ಕೋಡು, ನಿರ್ದೇಶಕರಾದ ಮಂಜುನಾಥ ಗಾಣಿಗ ಗಂಗೊಳ್ಳಿ, ನವೀನ್ ಎನ್. ನಾವುಂದ, ಬಿ. ಎಂ. ನಾಗರಾಜ ಗಾಣಿಗ ಬೈಂದೂರು, ಕೆ. ರಮಾನಂದ ಕುಂದಾಪುರ, ಶಶಿಕಲಾ ನಾರಾಯಣ ಗಾಣಿಗ ಕುಂದಾಪುರ, ಜಾನಕಿ ಗಾಣಿಗ ಶಿರೂರು, ವಿವಿಧ ಸಹಕಾರಿ ಕ್ಷೇತ್ರದ ಧುರೀಣರು, ಸಂಘ-ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ನಿರ್ದೇಶಕ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.