ಶಾಂಘೈ: ಈ ಹೋಟೆಲ್‌ನಲ್ಲಿ ಕಣ್ಣಿಗೆ ಬೇಕಾದ್ದನ್ನು ಹೊಟ್ಟೆ ಬಿರಿಯುವಂತೆ ತಿನ್ನಲು ಕಾಸು ಕೊಡಬೇಕಿಲ್ಲ. ಆದರೆ ಒಂದೇ ಕಂಡಿಷನ್, ನೀವು ಸುರಸುಂದರರಾಗಿರಬೇಕು!
ಚೀನಾದ ಜೆಂಗ್ಜುಹು ಪ್ರಾಂತದಲ್ಲಿನ ಒಂದು ನಗರದಲ್ಲಿರುವ ಕೊರಿಯಾ ಶೈಲಿಯ ಈ ಹೋಟೆಲ್ ಕೊಟ್ಟಿರುವ ಆಫರ್ ಹೆಸರು ‘ಫ್ರೀ ಮೀಲ್ ಫಾರ್ ಗುಡ್ ಲುಕಿಂಗ್’ (ಸುಂದರವಾಗಿರುವವರಿಗೆ ಉಚಿತ ಊಟ). ಪುಗ್ಸಟ್ಟೆ ಊಟ ಉಣ್ಣಲು ದಿನವೂ ಸುಮಾರು ಐವತ್ತು ಜನರು ಗೇಟ್‌ನಲ್ಲಿ ಕ್ಯೂ ನಿಲ್ಲುತ್ತಾರೆ ಎಂದು ಹೋಟೆಲ್ ಹೇಳಿಕೊಂಡಿದೆ.
ಗ್ರಾಹಕರು ಊಟವನ್ನು ಆರ್ಡರ್ ಮಾಡುವ ಮುನ್ನ ಸೌಂದರ್ಯ ತಜ್ಞರು, ಪ್ಲಾಸ್ಟಿಕ್ ಸರ್ಜರಿ ತಜ್ಞರಿರುವ ತಂಡದ ಎದುರು ಹಾಜರಾಗುತ್ತಾರೆ. ನಂತರ ಮಷಿನ್‌ವೊಂದು ಗ್ರಾಹಕರ ಫೋಟೊವನ್ನು ಸೆರೆ ಹಿಡಿಯುತ್ತದೆ. ತೀರ್ಪುಗಾರರು ಸ್ಪರ್ಧಿಗಳ ಮುಖ, ಕಣ್ಣು, ಮೂಗು, ಗದ್ದ ಹಾಗೂ ಹಣೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಯಾರು ನಿಜಕ್ಕೂ ಸುಂದರರು ಎಂದು ಷರಾ ಬರೆಯುತ್ತಾರೆ. ಈ ಸುಂದರಿ, ಸುಂದರಾಂಗರು ತಾವು ತಿನ್ನುವ ಆಹಾರಕ್ಕೆ ಹಣ ಕೊಡಬೇಕಿಲ್ಲ ಎಂದು ಚೀನಾದ ಪತ್ರಿಕೆಗಳು ವರದಿ ಮಾಡಿವೆ.
”ಹೋಟೆಲ್‌ನ ಮಾಲಿಕರು ಇಂಗ್ಲಿಷ್ ಮಾತನಾಡುವ ಕಲೆಗಿಂತ ದೈಹಿಕ ಸೌಂದರ‌್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ,” ಎಂಬ ತಿಳಿಗೆಂಪು ಬಣ್ಣದ ಜಾಹೀರಾತು ಫಲಕವೊಂದು ಕಳೆದ ಶನಿವಾರದಿಂದ ಹೋಟೆಲ್ ಮುಂದೆ ರಾರಾಜಿಸುತ್ತಿದೆ.
ಈ ಮಧ್ಯೆ, ಜೆಂಗ್ಜುಹು ಪ್ರಾಂತ್ಯದ ಸ್ಥಳೀಯ ಆಡಳಿತವು ಹೋಟೆಲ್‌ನ ಈ ಜಾಹೀರಾತಿನ ವಿರುದ್ಧ ಕೆಂಡ ಕಾರಿದೆ. ”ಇದು ಈ ಪ್ರಾಂತ್ಯದ ಘನತೆಗೆ ಧಕ್ಕೆ ತರುತ್ತದೆ. ಅದೂ ಅಲ್ಲದೆ ಈ ರೀತಿ ಉಚಿತ ಊಟ ಹಂಚುವ ಸ್ಫರ್ಧೆಗೆ ಅನುಮತಿಯನ್ನೂ ಪಡೆದಿಲ್ಲ,” ಎಂದು ಹೇಳಿದೆ. ಆದರೆ, ಈ ಆಫರ್ ನಿಲ್ಲಿಸುವುದಿಲ್ಲ ಎಂದು ಹೋಟೆಲ್‌ನ ವ್ಯವಸ್ಥಾಪಕರು ತಿಳಿಸಿದ್ದಾರೆ.
ಜಾಲತಾಣದಲ್ಲಿ ವಿಡಂಬನೆ
ಹೋಟೆಲ್ ನೀಡಿರುವ ಆಫರ್ ಕುರಿತು ವರದಿಯಾಗುತ್ತಿದ್ದಂತೆಚೀನಾದ ಪ್ರಖ್ಯಾತ ಸಾಮಾಜಿಕ ಜಾಲತಾಣ ವೈಬೊದಲ್ಲಿ ಅದರ ನಡೆಯ ಬಗ್ಗೆ ಭಾರಿ ಟೀಕೆ, ತಮಾಷೆ ವ್ಯಕ್ತವಾಗುತ್ತಿವೆ.ಕೆಲವರು ತುಂಟ ಪ್ರಶ್ನೆಯನ್ನು ಪೋಸ್ಟ್ ಮಾಡಿ ಹೋಟೆಲ್ ಆಡಳಿತ ಮಂಡಳಿಯನ್ನು ಕಿಚಾಯಿಸುತ್ತಿದ್ದಾರೆ. ”ನೋಡಲು ಕೆಟ್ಟದಾಗಿರುವವರು ಊಟದ ದುಪ್ಪಟ್ಟು ದುಡ್ಡು ತೆರಬೇಕೇ?” ಎಂದು ಪ್ರಶ್ನಿಸಿರುವ ವ್ಯಕ್ತಿಯೊಬ್ಬನ ಪೋಸ್ಟ್‌ಗಳಿಗೆ ಹೆಚ್ಚೆಚ್ಚು ಲೈಕ್ಸ್‌ಗಳು ಬರುತ್ತಿವೆ. ”ನಾನು ಈ ಅಳತೆಯನ್ನು ಕೂತಲ್ಲೇ ಮಾಡಬಲ್ಲೆ. ನನ್ನ ಮೂತಿ ನೋಡಿ ಹೋಟೆಲ್‌ನವರು ಶೇ. ಒಂದರಷ್ಟು ರಿಯಾಯಿತಿ ಕೊಡುತ್ತಾರೆ,” ಎಂದು ಮತ್ತೊಬ್ಬ ಇದೇ ಜಾಲತಾಣದಲ್ಲಿ ಚಟಾಕಿ ಹಾರಿಸಿದ್ದಾನೆ.
ಕೃಪೆ: ವಿಕ