ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತದ ಹುಟ್ಟೂರಲ್ಲಿ ಶಿವರಾಮ ಕಾರಂತರ ನೆನಪಿಗಾಗಿ ಸುಮಾರು ಎರಡು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸ್ಮಾರಕ ಭವನ ಸಾರ್ಥಕ್ಯವನ್ನು ಕಂಡಿದೆ ತಪ್ಪಾಗಲಾರದು. ವಾರಕ್ಕೊಂದರಂತೆ ಇಲ್ಲಿ ಕಲೆ, ಸಾಹಿತ್ಯ ಮತ್ತು ಸಂಸ್ಸೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಯುತ್ತಿದೆ. ಈ ಮೂಲಕ ಈ ಪ್ರದೇಶದ ಉಡುಪಿ ಜಿಲ್ಲೆಯಲ್ಲಯೇ ವಿಭಿನ್ನವಾಗಿ ಗುರುತಿಸಿಕೊಂಡಿರುವ ಕಾರಂತ ಭವನದಲ್ಲಿ ಇಂದಿನಿಂದ ಅಕ್ಟೋಬರ್ ೧೦ರ ವರೆಗೆ ನಿತ್ಯವು ಸಾಂಸ್ಕೃತಿಕ ಸಾಹಿತ್ಯಿಕ ಕಲೆ ಇವೇ ವಿಚಾರಗಳಿಂದ ಕೂಡಿದ ತಂಬೆಲರು ೨೦೧೭ ಸಾಹಿತ್ಯಿಕ ಸಾಂಸ್ಕೃತಿಕ ಸುಗ್ಗಿ ಉತ್ಸವ ನಡೆಯಲಿದೆ.
ಕೋಟತಟ್ಟು ಗ್ರಾಮ ಪಂಚಾಯಿತಿಯಲ್ಲಿ ೨೦೧೧ರಲ್ಲಿ ಲೋಕಾರ್ಪಣೆಗೊಂಡ ಕೋಟ ಕಾರಂತ ಕಲಾಭವನ (ಕಾರಂತ ಥೀಂ ಪಾರ್ಕ್) ಕಾರಂತರು ನಲಿದಾಡಿದ ಹುಟ್ಟೂರ ಕೊಳ್ಕೆರೆಯಲ್ಲಿ ನಿರ್ಮಾಣಗೊಂಡಿದೆ. ಖ್ಯಾತ ಸಾಹಿತಿ ಕಾರಂತರಿಗೆ ಹುಟ್ಟೂರಲ್ಲಿಯೆ ಅವಿಸ್ಮರಣೀಯ ಸ್ಮಾರಕ ನಿರ್ಮಾಣವಾಗಬೇಕೆಂಬ ಅಭಿಮಾನಿಗಳ ಹಾರೈಕೆ ಮತ್ತು ಡಾ.ಶಿವರಾಮ ಕಾರಂತರ ಅಪ್ಪಟ ಅಭಿಮಾನಿ ಮಾಜಿ ಸಚಿವ ಹಾಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರ ಶ್ರಮ ಸ್ವರೂಪವಾಗಿ ಎದ್ದು ನಿಂತಿರುವುದು ಇತಿಹಾಸ.
ಕಾರಂತ ಥೀಂ ಪಾರ್ಕ್‌ನಲ್ಲಿ ವರ್ಷದಿಂದ ವರ್ಷಕ್ಕೆ ಹೊಸ ಆಕರ್ಷಣೆಗಳನ್ನು ಪಡೆದುಕೊಳ್ಳುತ್ತಿರುವುದು, ಪ್ರವಾಸಿಗರು ಮತ್ತು ಕಾರಂತಾಭಿಮಾನಿಗಳನ್ನು ತನ್ನತ್ತ ಆಕರ್ಷಿಸುವಂತೆ ಮಾಡಿದೆ. ಈ ಮೊದಲು ಕಲ್ಲಿನ ಉಯ್ಯಾಲೆ, ಕಲ್ಲಿನ ಕಾರಂಜಿ, ಕಲ್ಲು ಬೆಂಚುಗಳು ಮತ್ತು ಕಾರಂತರ ಫೈಬರ್ ಮೂರ್ತಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಲೋಕಾರ್ಪಣೆಗೊಳಿಸಿದ್ದರೆ. ಇದಲ್ಲದೇ ಕಾರಂತ ಥೀಂ ಪಾರ್ಕ್‌ನ ಮುಖ್ಯ ದ್ವಾರದಲ್ಲಿ ಬಡುಗು ಮತ್ತು ತೆಂಕಿನ ಪುಂಡು ಯಕ್ಷಗಾನ ವೇಷಧಾರಿಗಳು, ಕಾರಂತ ಕೃತಿ ಮತ್ತು ಇಲ್ಲಿನ ಸಿರಿ ಸೊಬಗುಗಳು ಲಭ್ಯವಿರುವ ಕಾರಂತರ ಸಿರಿ ಉತ್ಪನ್ಯಗಳ ಮಳಿಗೆಯ ಮೇಲೆ ಕಾರಂತರ ಯಕ್ಷಗಾನ ಬ್ಯಾಲೆ ಕಲ್ಪನೆಯ ಜಟಾಯು, ಪುಷ್ಕರಣಿ ಮಧ್ಯದಲ್ಲಿ ನಿಂತಿರುವ ಕಾರಂತರ ಕಂಚಿನ ಪ್ರತಿಮೆ, ಸ್ಥಳೀಯ ಗ್ರಾಮೀಣ ಬದುಕಿನ ಚಿತ್ರಣ ಬಿಂಬಿಸುವ ಎತ್ತಿನ ಗಾಡಿ ಮತ್ತು ಅದರ ಮಾಲಕ ಕೂಸಣ್ಣನ ಕಲಾಕೃತಿ, ನೂತನವಾಗಿ ಸೇರ್ಪಡೆಯಾಗಿರುವ ಯಕ್ಷಗಾನದ ರಾಧಾ ಕೃಷ್ಣರು ತೂಗುಯ್ಯಾಲೆಯಲ್ಲಿರುವ ಮೂರ್ತಿಗಳು, ಚೋಮನ ದುಡಿಯ ಚೋಮ, ಮೂಕಜ್ಜಿಯ ಕನಸಿನ ಅಜ್ಜಿ ಮತ್ತು ಮೊಮ್ಮಕ್ಕಳ ಪ್ರತಿಭೆಗಳು, ಕಾರಂತರ ಪುಸ್ತಕದ ಕಲಾಕೃತಿ, ಜ್ಞಾನ ಪೀಠ ಪ್ರಶಸ್ತಿ ಪಡೆದ ಕನ್ನಡದ ಶ್ರೇಷ್ಠ ಸಾಹಿತಿಗಳ ಕಲಾಕೃತಿ, ಕಾರಂತರು ಮತ್ತು ಕ್ಯಾಮೆರಾ ಕಲಾಕೃತಿಗಳು ಕಾರಂತ ಥೀಂ ಪಾರ್ಕ್‌ನ ಪ್ರಮುಖ ಆಕರ್ಷಣೆಗಳಾಗಿವೆ. ಸದ್ಯ ಕಾರಂತ ಥೀಂ ಪಾರ್ಕ್ ಸಂಪೂರ್ಣ ಸೋಲಾರ್ ಅಳವಡಿಕೆಯಾಗಿ ಜಗಮಗಿಸುತ್ತಿದೆ. ಇಷ್ಟಲ್ಲದೇ ಕಾರಂತರ ಹುಟ್ಟೂರಿನಲ್ಲಿ ಕಾರಂತರ ನೆನಪನ್ನು ಹಚ್ಚಹಸಿರಾಗಿಸಿರಬೇಕೆಂಬ ಉದ್ದೇಶದೊಂದಿಗೆ ಪ್ರತಿವರ್ಷ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಈ ಪ್ರಶಸ್ತಿಯ ಮೂಲಕ ಹುಟ್ಟೂರ ಗ್ರಾಮ ಪಂಚಾಯಿತಿ ಕಾರಂತರಿಗೆ ನಮನ ಸಲ್ಲಿಸುತ್ತಿದ್ದು ಇದರ ಜತೆಗೆ ಗ್ರಾಮ ಪಂಚಾಯಿತಿ ಮುತುವರ್ಜಿ ವಹಿಸಿದ ಈ ಕಲಾ ಭವನ ಕೋಟತಟ್ಟು ಗ್ರಾಮಪಂಚಾಯಿತಿ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಇಂದಿನಿಂದ ಅಕ್ಟೋಬರ್ ೧೦ರ ವರೆಗೆ ಕಾರಂತ ಥೀಂ ಪಾರ್ಕನಲ್ಲಿ ತಂಬೆಲರು ೨೦೧೭ ಕಾರ್ಯಕ್ರಮ ನಡೆಯಲಿದೆ. ಖ್ಯಾತ ನಟ ನಿರ್ದೇಶಕ ಕಾರಂತಾಭಿಮಾನಿ ಪ್ರಕಾಶ್ ರೈ ಅವರಿಗೆ ಅಕ್ಟೋಬರ್ ೧೦ರಂದು ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರತಿನಿತ್ಯವು ಕೂಡ ಕಾರ್ಯಕ್ರಮಗಳು ನಡೆಯಲಿದ್ದು, ಇಂದು ಅಕ್ಟೋಬರ್ ೧ರಂದು ಕಾರಂತೋತ್ಸವಕ್ಕೆ ಚಾಲನೆ ನೀಡಲಾಗುತ್ತಿದೆ. ಪ್ರಥಮ ದಿನ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ೧೦ಕ್ಕೆ ಗೀತಾನಂದ ಫೌಂಡೇಶನ್, ದಿವಂಗತ ಮನೋಹರ್ ತೋಳಾರ್ ದತ್ತಿನಿಧಿ, ರೋಟರಿ ಕ್ಲಬ್ ಕೋಟ ಸಿಟಿ, ಸಮಗ್ರ ಶಿಶು ಅಭಿವೃದ್ಧಿ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬ್ರಹ್ಮಾವರ ಸಹಯೋಗದಲ್ಲಿ ಅಂಗನವಾಡಿ ಪುಟಾಣಿಗಳ ಸಮಾವೇಶ ಅಕ್ರೂಟ್ ಚಿಣ್ಣರ ಜಗುಲಿ ನಡೆಯಲಿದೆ. ಸಂಜೆ ೫ಕ್ಕೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಕಾರಂತರಿಗೆ ಪಂಚನಮನ ಅನಾವರಣ ನಡೆಯಲಿದೆ.