ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು, ತಗ್ಗರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಸರಕಾರಿ ಜಾಗ/ಖಾಸಗಿ ಜಾಗ ಗುರುತಿಸಲು ಕಂದಾಯ ನಿರೀಕ್ಷಕರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸಮತಿ ಸಭೆಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರೊಡನೆ ಜಂಟಿ ನಡೆಸಲು ಜಿಲ್ಲಾ ಯೋಜನಾ ನಿರ್ದೇಶಕರು ನೀಡಿದ ಸೂಚನೆಯಂತೆ ಈ ಬಗ್ಗೆ ಕೂಡಲೇ ಸಭೆಯನ್ನು ಸಂಯೋಜಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಸ್ಥಳೀಯಾಡಳಿತವನ್ನು ಒತ್ತಾಯಿಸಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾಪರ ತಾಲೂಕು ಸಮಿತಿ ಮತ್ತು ಬೈಂದೂರು ತಗ್ಗರ್ಸೆ ಗ್ರಾಮಗಳ ನಿವೇಶನ ರಹಿತರ ಹೋರಾಟ ಸಮಿತಿಗಳ ನೇತೃತ್ವದಲ್ಲಿ ಬಡ ನಿವೇಶನ ರಹಿತರಿಂದ ಭೂಮಿ ಹಕ್ಕಿಗಾಗಿ ಪಡೆದ ಅರ್ಜಿಗಳನ್ನು ಗ್ರಾಮ ಪಂಚಾಯತ್ ಕಛೇರಿಗೆ ಹಸ್ತಾಂತರಿಸುವ ಹೋರಾಟ ಕಾರ್ಯಕ್ರಮ ಸಭೆಯಲ್ಲಿ ಅವರು ಮಾತನಾಡಿದರು. ಡೀಮ್ಡ್ ಅರಣ್ಯ ಪ್ರದೇಶ, ಗೋಮಾಳ ಪ್ರದೇಶದಲ್ಲಿ ವಾಸವಾಗಿರುವ ಬಡನಿವೇಶನ ರಹಿತರ ಕುಟುಂಬಕ್ಕೆ ಹಕ್ಕು ಪತ್ರ ಕೊಡಲು ಭೂಕಂದಾಯ ಕಾಯಿದೆ ತಿದ್ದುಪಡಿ ಮಾಡಲು ಜನಪ್ರತಿನಿಧಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಆಗ್ರಹಿಸಿದರು.
ಸಿಐಟಿಯು ಮುಖಂಡರಾದ ಸುರೇಶ್ ಕಲ್ಲಾಗರ, ಎಚ್. ನರಸಿಂಹ ಪ್ರತಿಭಟನಾಕಾರ ನಿವೇಶನ ರಹಿತರನ್ನುದ್ದೇಶಿಸಿ ಮಾತನಾಡುತ್ತಾ ಹೋರಾಟಕ್ಕೆ ಬೆಂಬಲ ವ್ಯಕ್ತ ಪಡಿಸಿದರು. ನಾಗರತ್ನ ನಾಡ, ಕುಶಲ, ಗಣೇಶ ತೊಂಡೆಮಕ್ಕಿ, ಗಣೇಶ ಮೊಗವೀರ, ರೋನಿ ನಜರತ್, ಗೋವಿಂದ ಪೂಜಾರಿ, ಮುತ್ತ ಮಾರ್ಕೊಡ, ಶೀಲಾವತಿ ಉಪಸ್ಥಿತರಿದ್ದರು.