ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ನಮ್ಮ ಕೊಲ್ಲೂರು ಸ್ವಚ್ಚ ಕೊಲ್ಲೂರು ಅಭಿಯಾನದಡಿಯಲ್ಲಿ ಪ್ರತಿ ತಿಂಗಳು ಸ್ವಚ್ಚತಾ ಅಭಿಯಾನವನ್ನು ಆಯೋಜಿಸಲಾಗುತ್ತಿದೆ. ಪ್ರಸಿದ್ಧ ಯಾತ್ರಾಸ್ಥಳವೆನಿಸಿಕೊಂಡಿರುವ ಕೊಲ್ಲೂರು ಪರಿಸರ ಸ್ವಚ್ಚತೆ ಮಾಡುತ್ತಿದ್ದು, ಸ್ವಚ್ಚತೆಯ ಅರಿವು ಅಭಿಯಾನ ನಿರಂತವಾಗಿ ಮುಂದುವರಿಯಲಿದೆ ಎಂದು ಕೊಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಹೇಳಿದರು.
ಅವರು ಗ್ರಾಮ ಪಂಚಾಯತ್ ಕೊಲ್ಲೂರು, ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲೂರು, ವನ್ಯಜೀವಿ ವಲಯ ಕೊಲ್ಲೂರು, ಮಹಿಳಾ ಮಂಡಲ, ನವಶಕ್ತಿ ಮಹಿಳಾ ವೇದಿಕೆ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ, ಜೀಪು ಟ್ಯಾಕ್ಸಿ ಮತ್ತು ರಿಕ್ಷಾ ಚಾಲಕರ ಮಾಲಕರ ಸಂಘ, ಆರಕ್ಷಕ ಠಾಣೆ ಕೊಲ್ಲೂರು, ಸುಪರ್ಣ ಟ್ರಸ್ಟ್, ನವೋದಯ ಸ್ವಸಹಾಯ ಸಂಘ, ಸ್ತ್ರೀಶಕ್ತಿ ಸಂಘ ಹಾಗೂ ಸಮಸ್ತ ನಾಗರಿಕರು ಹಾಗೂ ಸಹಯೋಗದೊಂದಿಗೆ ಮಾಸ್ತಿಕಟ್ಟೆಯಿಂದ ಸ್ನಾನಘಟ್ಟ ಹಾಗೂ ಕೊಲ್ಲೂರು ದೇವಳದ ತನಕ ಆಯೋಜಿಸಲಾಗಿದ್ದ ಕೊಲ್ಲೂರಿನಲ್ಲಿ ಸ್ವಚ್ಛಾತಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಚ್ಛ ಕೊಲ್ಲೂರು ಅಭಿಯಾನದ ಮೂಲಕ ದೇವಳದ ಪರಿಸರದಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಪಂಚಾಯತ್ ಮೂಲಕ ಪಣತೊಟ್ಟಿದ್ದೇವೆ. ಸ್ವಚ್ಛತೆಯ ಅರಿವು ಮೂಡಿಸಿ ಗ್ರಾಮಸ್ಥರು ಸ್ವಪ್ರೇರಣೆಯಿಂದ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಉದ್ದೇಶ ಹೊಂದಿದ್ದೇವೆ ಎಂದರು.
ಈ ಸಂದರ್ಭ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಮೇಶ್ ಗಾಣಿಗ ಕೊಲ್ಲೂರು, ವಂಡಬಳ್ಳಿ ಜಯರಾಮ ಶೆಟ್ಟಿ, ನರಸಿಂಹ ಹಳಗೇರಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ತಾಪಂ ಸದಸ್ಯೆ ಗ್ರೀಷ್ಮಾ ಬಿಡೆ, ಆರೋಗ್ಯಾಧಿಕಾರಿ ರೆನಿಟಾ ಫೆರ್ನಾಂಡಿಸ್, ಕೊಲ್ಲೂರು ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಗ್ರಾಪಂ ಸದಸ್ಯರಾದ ವಿಶ್ವನಾಥ ಅಡಿಗ, ನೇತ್ರಾವತಿ, ಪಿಡಿಓ ಅಣ್ಣಮ್ಮ ಮೊದಲಾದವರು ಹಾಜರಿದ್ದರು. ಸ್ಥಳೀಯರಾದ ಚಂದ್ರ ಬಳೆಗಾರ್ ಸಹಕಾರಿಸಿದರು.
















