ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶಿವರಾಮ ಕಾರಂತರು ಅವಗಣನೆಗೆ ಈಡಾಗಿದ್ದ ಯಕ್ಷಗಾನಕ್ಕೆ ವಿಶೇಷ ಮಾನ್ಯತೆ ತಂದು ಕೊಟ್ಟ ಪರಿಣಾಮ ಈಗ ಈ ಕಲೆ ವ್ಯಾಪಕವಾಗಿ ಬೆಳೆದಿದೆ. ಹೊಸ ಪ್ರಯೋಗಗಳ ಮೂಲಕ ಹೊಸ ಪ್ರದೇಶಗಳಿಗೆ ವಿಸ್ತರಿಸಿದೆ. ಕಲಾವಿದರ ಆರ್ಥಿಕ ಮಟ್ಟ ಸುಧಾರಿಸಿದೆ. ಇದು ಇನ್ನಷ್ಟು ಬೆಳೆಯಬೇಕು. ಅದಕ್ಕೆ ಸಾಂಸ್ಕೃತಿಕ ಸಂಘಟನೆಗಳು ಪೋಷಣೆ ನೀಡಬೇಕು ಎಂದು ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ ಹೇಳಿದರು.
ನಾಗೂರು ಒಡೆಯರಮಠ ಗೋಪಾಲಕೃಷ್ಣ ಕಲಾಮಂದಿರದ ಭಾಗವತ ಜಿ. ಆರ್. ಕಾಳಿಂಗ ನಾವುಡ ಸ್ಮರಣ ವೇದಿಕೆಯಲ್ಲಿ ಶನಿವಾರ ೫ನೇ ವರ್ಷದ ತಾಳಮದ್ದಲೆ ಸಪ್ತಾಹ ಸಮಾರೋಪದಲ್ಲಿ ಮಾತನಾಡಿದರು. ಅಕ್ಷರ ಜ್ಞಾನ ಮತ್ತು ಶಿಕ್ಷಣ ಒಂದೇ ಅಲ್ಲ. ಅಕ್ಷರದ ಅರಿವು ಇಲ್ಲದೆಯೂ ವಿದ್ಯಾವಂತನಾಗಬಹುದು ಎನ್ನುವುದಕ್ಕೆ ಯಕ್ಷಗಾನ ಕಲಾವಿದರಲ್ಲಿ ಉದಾಹರಣೆ ದೊರೆಯುತ್ತದೆ. ಅವರು ತಾವೂ ಬೆಳೆದು ಜನರಿಗೂ ಅನೌಪಚಾರಿಕ ಶಿಕ್ಷಣ ನೀಡುತ್ತಾರೆ. ಪೌರಾಣಿಕ ಕಥಾಪ್ರಸಂಗದ ಪ್ರದರ್ಶನಗಳ ಮೂಲಕ ಜನರಿಗೆ ಪುರಾಣಗಳ ಅರಿವು ಮೂಡಿಸುವುದರ ಜತೆಗೆ ಶುದ್ಧ ಕನ್ನಡ ಭಾಷೆಯನ್ನು ಕಲಿಸುತ್ತಾರೆ. ಆ ನೆಲೆಯಲ್ಲಿ ಪರಿಸರದಲ್ಲಿ ಕಲಾಸಕ್ತಿಯನ್ನು ಬೆಳೆಸಿ ಸಂಸ್ಕಾರ ನೀಡುತ್ತಿರುವ ಧಾರೇಶ್ವರ ಯಕ್ಷಬಳಗ ಐದು ವರ್ಷಗಳಿಂದ ನಡೆಸಿಕೊಂಡು ಬಂದ ಯಕ್ಷಗಾನ ಜ್ಞಾನಯಜ್ಞ, ಕಲಾವಿದರ ಸಂಮಾನ ಅನುಕರಣೀಯ ಎಂದರು.
ಯಕ್ಷಗಾನ ಕೃಷಿಗೆ ಹೊಸ ಆಯಾಮ ಕೊಟ್ಟು ನಿರಂತರ ಅದರಲ್ಲಿ ತೊಡಗಿಕೊಂಡ ಹಿರಿಯ ಕಲಾವಿದರು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ. ಅವರು ರಂಗದ ಮೇಲೆ ಮೂಡಿಸಿದ ಹೆಜ್ಜೆಯ ಗುರುತುಗಳಿಗೆ ಸಾವೆಂಬುದಿಲ್ಲ. ಇಂತಹ ಮೇರು ವ್ಯಕ್ತಿತ್ವದ ಕಲಾವಿದರು ಚಿರಸ್ಮರಣೀಯರು ಎಂದು ಇತ್ತೀಚಿಗೆ ನಿಧನರಾದ ಚಿಟ್ಟಾಣಿಯವರನ್ನು ನೆನಪಿಸಿಕೊಂಡರು.
ಪ್ರಸಕ್ತ ಸಾಲಿನ ತೆಕ್ಕಟ್ಟೆ ಆನಂದ ಮಾಸ್ತರ್ ಸ್ಮರಣೆಯ ’ಕಲಾತಪಸ್ವಿ’ ಪ್ರಶಸ್ತಿಯನ್ನು ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಗೆ ಮರಣೋತ್ತರವಾಗಿ ಪ್ರದಾನ ಮಾಡಲಾಯಿತು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಖಂಬದಕೋಣೆ ರೈತರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಕೀರ್ತಿಶೇಷ ಕಲಾವಿದ ತೆಕ್ಕಟ್ಟೆ ಆನಂದ ಮಾಸ್ತರ್ ಅವರ ಪತ್ನಿ ಸುನಂದಾ ಶೆಣೈ ಉಪಸ್ಥಿತರಿದ್ದರು. ಗೋವಿಂದ ಮಟ್ನಕಟ್ಟೆ ನಿರೂಪಿಸಿ ವಂದಿಸಿದರು. ನಂತರ ಸಪ್ತಾಹದ ಕೊನೆಯದಾದ ’ಶ್ರೀಕೃಷ್ಣ ಸಂಧಾನ’ ಪ್ರಸಂಗದ ತಾಳಮದ್ದಲೆ ನಡೆಯಿತು.