ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲಾಡಳಿತ, ಉಡುಪಿ ವತಿಯಿಂದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮವು ಬೀಡಿನಗುಡ್ಡೆಯ ಮಹಾತ್ಮ ಗಾಂಧೀ ಬಯಲು ರಂಗ ಮಂದಿರದಲ್ಲಿ ಇಂದು ನಡೆಯಿತು. ಕಾರ್ಯಕ್ರಮದಲ್ಲಿ ದ್ವಜಾರೋಹಣೆ ನೆರವೇರಿಸಿದ ರಾಜ್ಯದ ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವರು ಮತ್ತು ಜಿಲ್ಲ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕನ್ನಡ ರಾಜ್ಯೋತ್ಸವದ ಸಂದೇಶ ನೀಡಿದರು.
ಜಿಲ್ಲಾಡಳಿತದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೩೦ ಮಂದಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೂ ೨೦೧೫ ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಜಿಲ್ಲಾ ಮಟ್ಟದಲ್ಲಿ ಗರಿಷ್ಠ ಅಂಕ ಪಡೆದ ೫ ಮಂದಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಗಳನ್ನು ವಿತರಿಸಲಾಯಿತು.
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಉಡುಪಿ ಕುಂಜಿಬೆಟ್ಟುವಿನ ಎಂಜಿಎಂ ಕಾಲೇಜಿನಲ್ಲಿ ಕನ್ನಡ ತಾಯಿ ಭುವನೇಶ್ವರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಪೂಜೆ ಸಲ್ಲಿಸಿದ ನಂತರ ವಿವಿಧ ಇಲಾಖೆಗಳಿಂದ ನಿರ್ಮಿಸಿದ್ದ ಸ್ಥಬ್ಧಚಿತ್ರಗಳ ಮೆರವಣಿಗೆ ನಡೆಯಿತು. ಸ್ಥಬ್ಧಚಿತ್ರದಲ್ಲಿ ಕಾರ್ಮಿಕ ಇಲಾಖೆ ಪ್ರಥಮ, ನಿರ್ಮಿತಿ ಕೇಂದ್ರ ದ್ವಿತೀಯ ಹಾಗೂ ಅರಣ್ಯ ಇಲಾಖೆಗೆ ತೃತೀಯ ಬಹುಮಾನ ನೀಡಲಾಯಿತು. ಕೃಷಿ, ತೋಟಗಾರಿಕೆ, ಪ್ರವಾಸೋದ್ಯಮ, ವಾರ್ತಾ ಇಲಾಖೆ, ಶಿಕ್ಷಣ, ಆರೋಗ್ಯ, ನಗರಸಭೆ ಮುಂತಾದ ಇಲಾಖೆಗಳ ಸ್ಥಬ್ತ ಚಿತ್ರಗಳು ಮನಸೆಳೆದವು. ಮುಕುಂದ ಕೃಪ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಳಕಾಡು, ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಆಂಗ್ಲ ಮಾಧ್ಮಯ ಪ್ರೌಢಶಾಲೆ ಉದ್ಯಾವರ, ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪಲ್ಲವಿ ಸುಧೀರ್ ಬಳಗದ ಸಂಗೀತ ಕಾರ್ಯಕ್ರಮ ಕನ್ನಡ ಸಂಸ್ಕೃತಿ ಇಲಾಖೆಯಿಂದ ಪ್ರಾಯೋಜಿಸಲ್ಪಟ್ಟಿತು. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ, ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ. ಬಾಲಕೃಷ್ಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರ್ರಾನ್ಸಿಸ್, ಅಪರ ಜಿಲ್ಲಾಧಿಕಾರಿ ಅನುರಾಧ, ತಹಸೀಲ್ದಾರ್ ಮಹೇಶ್ಚಂದ್ರ, ಪೌರಾಯುಕ್ತ ಮಂಜುನಾಥಯ್ಯ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಯೋಗೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.