ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸುವರ್ಣ ವರ್ಷಾಚರಣೆಯ ಸಂಭ್ರಮದಲ್ಲಿರುವ ಕುಂದಾಪುರ ವಲಯದ ಬಿದ್ಕಲ್‌ಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ, ಹಾಗೂ ಪುಟಾಣಿಗಳಾದ ಪರೀಕ್ಷಿತ್ ಜಿ ಐತಾಳ್ ಹಾಗೂ ಶಯಂತ್ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ರೂಪಿಸಿದ ಮಕ್ಕಳ ಸಾಹಿತ್ಯದೊಲವಿನ ವೇದಿಕೆಯಾದ ಚಾರಣ ಪತ್ರಿಕೆಯ ೯ನೇ ಸಂಚಿಕೆ ಅನಾವರಣ ಕಾರ್ಯಕ್ರಮವು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶಾಂತಾರಾಮರ ಅಧ್ಯಕ್ಷತೆಯಲ್ಲಿ ಜರುಗಿತು. ಕನ್ನಡಾಂಬೆಗೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಶ್ರೀ ಶಾಂತಾರಾಮ ಚಾಲನೆ ನೀಡಿದರು. ಮಕ್ಕಳು ಕನ್ನಡ ಗೀತೆಗಳ ಸಮೂಹ ಗಾಯನದ ಮೂಲಕ ರಂಜಿಸಿದರು.
ಯುವಸಾಹಿತಿ ಪೂರ್ಣಿಮಾ ಎನ್ ಭಟ್ ಚಾರಣ ಸಂಚಿಕೆಯನ್ನು ಅನಾವರಣಗೊಳಿಸಿ ಎಲ್ಲಡೆ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರತೀ ತಿಂಗಳೂ ಸಾಹಿತ್ಯ ಸಂಚಿಕೆಯನ್ನು ರೂಪಿಸಿ ಮಕ್ಕಳಲ್ಲಿ ಸಾಹಿತ್ಯದೊಲವನ್ನು ಹುಟ್ಟು ಹಾಕುತ್ತಿರುವುದು ಶ್ಲಾಘನೀಯ. ಮಕ್ಕಳು, ಪೋಷಕರು ಇದರ ಉದ್ದೇಶವನ್ನು ಅರ್ಥಮಾಡಿಕೊಂಡು, ಕನ್ನಡವನ್ನು ಸ್ಪಷ್ಟವಾಗಿ ಬರೆಯುವ, ನಿರರ್ಗಳವಾಗಿ ಓದುವ ಮಾತನಾಡುವ ಕೌಶಲ ಬೆಳೆಸಿಕೊಳ್ಳಬೇಕು. ಯಾವುದೇ ಭಾಷೆಯನ್ನು ಕಲಿತರೂ ಕನ್ನಡಿಗರಾದ ನಮ್ಮಲ್ಲಿ ಕನ್ನಡತನ ಸದಾ ಜಾಗೃತವಾಗಿರಬೇಕು ಎಂದರು.
ಸಮಾರಂಭದಲ್ಲಿ ಸಾಹಿತಿ ಪೂರ್ಣಿಮಾ ಎನ್ ಭಟ್, ಪತ್ರಿಕಾ ಪ್ರಾಯೋಜಕರಾದ ಗಣಪತಿ ಮಹಾಲಕ್ಷ್ಮೀ ಐತಾಳ್, ಶ್ಯಾಮಲ ಗಣೇಶ್ ಶೆಟ್ಟಿ, ಹಳೆವಿದ್ಯಾರ್ಥಿ ಸಂಘದ ಕೋಶಾಧಿಕಾರಿ ದಿವಾಕರ್ ಬಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಸುಧಾಕರ, ಮುಖ್ಯೋಪಾಧ್ಯಾಯರಾದ ಶ್ರೀಮತಿ ನಾಗರತ್ನ ಉಡುಪ, ಸಹಶಿಕ್ಷಕರುಗಳಾದ ಸತೀಶ್ ಶೆಟ್ಟಿಗಾರ್, ಶ್ರೀಮತಿ ರಮಣಿ, ಜ್ಯೋತಿಲಕ್ಷ್ಮೀ, ಶ್ರೀಮತಿ ಚಿತ್ರಾ, ದೈಹಿಕ ಶಿಕ್ಷಣ ಶಿಕ್ಷಕಿ ಮಂಜುಳಾ ಶೆಟ್ಟಿ, ಗೌರವ ಶಿಕ್ಷಕಿಯರಾದ ಮಹಾಲಕ್ಷ್ಮೀ, ಭಾರತಿ, ವೇದಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು. ಪ್ರಾರಂಭದಲ್ಲಿ ಮುಖ್ಯಶಿಕ್ಷಕಿ ನಾಗರತ್ನ ಸ್ವಾಗತಿಸಿದರೆ, ಸಹಶಿಕ್ಷಕ ಸತೀಶ ಶೆಟ್ಟಿಗಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಶಿಕ್ಷಕಿ ಶಿ ಜ್ಯೋತಿಲಕ್ಷ್ಮೀ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.