ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ವಿರುದ್ಧ ಜನ ಬೇಸತ್ತಿದ್ದು, ರಾಜ್ಯ ಹಾಗೂ ಬೈಂದೂರಲ್ಲಿ ಕಾಂಗ್ರೆಸ್ ಮುಕ್ತ ಮಾಡುವ ನಿಟ್ಟಿನಲ್ಲಿ ಬೈಂದೂರಲ್ಲಿ ಪರಿವರ್ತನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಬಿಜೆಪಿ ಕಾರ‍್ಯಕಾರಿಣಿ ಸದಸ್ಯ ಬಿ.ಎಂ ಸುಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಕುಂದಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ.13ರಂದು ಮಧ್ಯಾಹ್ನ 3ಕ್ಕೆ ನಾಗೂರು ಸಂದೀಪನ ಶಾಲೆ ಮುಂಭಾಗ ಬೃಹತ್ ಪರಿವರ್ತನಾ ಸಮಾವೇಶ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ, ಸಂಸದೆ ಶೋಭಾ ಕರಂದ್ಲಾಜೆ ಅಲ್ಲದೆ ರಾಷ್ಟ್ರ ಹಾಗೂ ರಾಜ್ಯಮಟ್ಟದ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ನೀಡಿದರು.
ಪರಿವರ್ತನಾ ರಥಕ್ಕೆ ತಲ್ಲೂರು ಸಮೀಪ ಭಾರೀ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಗುತ್ತದೆ. ಅಲ್ಲಿಂದ ಮೆರವಣಿಗೆಯಲ್ಲಿ ನಾಯಕರ ಸಭಾ ಕಾರ‍್ಯಕ್ರಮ ಸ್ವಾಗತಿಸಲಾಗುತ್ತದೆ. 240 ಭೂತ್ ಮಟ್ಟದಿಂದಲೂ ಕಾರ‍್ಯಕರ್ತರು ಪಾಲ್ಗೊಳ್ಳಲಿದ್ದು, 15 ರಿಂದ 20 ಸಾವಿರ ಜನ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಚುನಾವಣೆಗೆ ಗಿಮಿಕ್‌ಗೆ ಕಾಂಗ್ರೆಸ್ ಗುದ್ದಲಿ ಪೂಜೆ:
ಬೈಂದೂರಿನಲ್ಲಿ ಬಿಜೆಪಿ ಪ್ರಬಲವಾಗಿದೆ. ಯಾವುದೇ ಆಂತರೀಕ ಭಿನ್ನಾಭಿಪ್ರಾಯಗಳಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನ ಗುರುತಿಸಿದ್ದಾರೆ. ಬೈಂದೂರು ಕ್ಷೇತ್ರ ಇನ್ನೂ ಕೂಡಾ ಅಭಿವೃದ್ಧಿಯಲ್ಲಿ ಹಿಂದುಳಿದೆ. ಇಲ್ಲಿ ಕಳೆದ 19 ವರ್ಷಗಳಿಂದ ನಿರೀಕ್ಷಿತ ಮಟ್ಟದಲ್ಲಿ ಶಿಕ್ಷಣ ಸಂಸ್ಥೆಗಳು ಬೆಳೆದಿಲ್ಲ. ಕೈಗಾರಿಕೆಗಳು ಅಭಿವೃದ್ದಿಗೊಂಡಿಲ್ಲ. ಉದ್ಯೋಗವಕಾಶಗಳ ಸೃಷ್ಟಿಯಾಗಿಲ್ಲ ಬೈಂದೂರು ಶಾಸಕರು ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಗುದ್ದಲಿ ಪೂಜೆ ಆರಂಭಿಸಿದ್ದಾರೆ ಎಂದು ಆರೋಪಿಸಿದ ಬಿ.ಎಂ.ಎಸ್, ಕ್ಷೇತ್ರಕ್ಕೆ ಸಂಸದರಿಂದ ಸಾಕಷ್ಟು ಅನುದಾನಗಳು ಬಂದಿದೆ. ಸುನಾಮಿ ಅನುದಾನದಿಂದ ಸಾಕಷ್ಟು ಪ್ರಯೋಜನ ಕ್ಷೇತ್ರಕ್ಕೆ ಬಂದಿದೆ ಎಂದರು.
ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ಮಾತನಾಡಿ ಕಳೆದ ಬಾರಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಸೋಲುಕಂಡಿದ್ದರೂ, ಸುಕುಮಾರ್ ಶೆಟ್ಟಿ ಜನ ಸಂಪರ್ಕದಿಂದ ದೂರು ಉಳಿಯದೆ ಪಕ್ಷ ಸಂಘಟನೆಗೆ ಶ್ರಮಿಸುತ್ತಿದ್ದಾರೆ. ಅವರ ನೇತೃತ್ದಲ್ಲಿ ನಡೆದ ತಾಪಂ, ಜಿಪಂ, ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಅಧಿಕ ಸ್ಥಾನ ಗಳಿಸಿದ್ದು, ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಬಿ.ಎಂ.ಸುಕುಮಾರ್ ಶೆಟ್ಟಿ ಅಭ್ಯರ್ಥಿಯಾಗಬೇಕು ಎನ್ನೋದು ಕಾರ‍್ಯಕರ್ತರ ಅಭಿಪ್ರಾಯವಾಗಿದ್ದು, ಅವರೇ ನಮ್ಮ ಅಭ್ಯರ್ಥಿಯಾಗುತ್ತಾರೆ ಎನ್ನುವ ಭರವಸೆ ಇದೆ ಎಂದರು. ಬೈಂದೂರು ಬಿಜೆಪಿ ಪ್ರಧಾನ ಕಾರ‍್ಯದರ್ಶಿ ದೀಪಕ್ ಕುಮಾರ್ ಶೆಟ್ಟಿ ಇದ್ದರು.
ಸ್ವಾತಂತ್ರ್ಯ ಬಂದ ನಂತರ ರಾಜ್ಯದಲ್ಲಿ ಹೆಚ್ಚು ಅಧಿಕಾರ ನಡೆಸಿದ್ದು, ಕಾಂಗ್ರೆಸ್ ಪಕ್ಷವಾಗಿದ್ದು, ಬೈಂದೂರು ಕೂಡಾ ಕಾಂಗ್ರೆಸ್ ಬೆಂಬಲಿಸಿತ್ತು. ಕ್ಷೇತ್ರದ ಗ್ರಾಮಗಳಲ್ಲಿ ಇನ್ನೂ ಕುಡಿಯುವ ನೀರಿನ ಸಮಸ್ಯೆ ಇದ್ದು, ಹಿಂದುಳಿದ ಕ್ಷೇತ್ರ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿದೆ. ಬೈಂದೂರು ಅಭಿವೃದ್ಧಿ ದೃಷ್ಟಿಯಲ್ಲಿ ಪರಿವರ್ತನಾ ಸಮಾವೇಶ ಪೂರಕ – ದೀಪಕ್ ಕುಮಾರ್ ಶೆಟ್ಟಿ, ಬೈಂದೂರು.