ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ಸುಮ್ಮನೆ ಆರೋಪ ಮಾಡುವ ಬದಲು ಜನಸಾಮಾನ್ಯ, ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆಯನ್ನು ಕೇಳಿದರೆ ಉತ್ತರ ದೊರೆಯುತ್ತೆ. ವಿಧಾನ ಸಭೆಯಲ್ಲಿ ಮಾತನಾಡಿದ್ದೇನೋ ಇಲ್ಲವೋ ಎನ್ನೋದಕ್ಕೆ ನನ್ನ ಬಳಿ ದಾಖಲೆ ಇದೆ. ಅವಶ್ಯವಿದ್ದ ಎಲ್ಲಾ ಕಾರ‍್ಯಕ್ರಮದಲ್ಲೂ ಪಾಲ್ಗೊಂಡಿದ್ದೇನೆ. ಖಾಲಿ ಗೋಡೆ, ಬಿಳಿ ಹಾಳೆ ಮೇಲೆ ಬರೆದದ್ದಕ್ಕೆಲ್ಲಾ ನಾನು ಉತ್ತರಿಸಲಾರೆ. ತಾಂತ್ರಿಕ ಸಮಸ್ಯೆ ಕಳೆದ ಬಳಿಕ ಬಿಜೆಪಿ ಸೇರುತ್ತೇನೆ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದ್ದಾರೆ.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಭಿವೃದ್ಧಿ ಕೆಲಸ ಬಗ್ಗೆ ಆನಗಳ್ಳಿ ಗ್ರಾಮಸ್ಥರು ಹೇಳಬೇಕು. ಕೋಡಿ ವಾಸಿಗಳು ಮಾತನಾಡಬೇಕು. ಕೋಡಿ, ಆನಗಳ್ಳಿ ಬ್ರಿಜ್ ರಚನೆ ಅಭಿವೃದ್ಧಿ ಅಲ್ಲವಾ? ಕುಂದಾಪುರ ಮಿನಿ ವಿಧಾಸಸೌಧ ರಚನೆ ಆಗಿಲ್ವಾ? ರಸ್ತೆಗಳ ಅಭಿವೃದ್ಧಿ ಮೂರುಕಡೆಜಟ್ಟಿ ನಿರ್ಮಾಣಅಭಿವೃದ್ಧಿಅಲ್ಲವಾ? ತಾಲೂಕಿನಲ್ಲಿ ೩೨ ಗ್ರಾಮ ಪಂಚಾಯತ್, ಒಂದು ಪಟ್ಟಣ ಹಾಗೂ ಪುರಸಭೆ ಇದ್ದು, ಶಾಸಕರ ಏನು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎನ್ನೋದಕ್ಕೆ ಉತ್ತರ ಅಲ್ಲವಾ? ಎಂದು ತಮ್ಮ ವಿರುದ್ಧದ ಇದ್ದ ಆರೋಪಗಳಿಗೆ ಉತ್ತರಿಸಿದರು.
ಕುಂದಾಪುರದಲ್ಲಿ ನಡೆಯುವ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಜನ ಸಾಮಾನ್ಯರಂತೆ ಪಾಲ್ಗೊಳ್ಳಲಿದ್ದು, ವೇದಿಕೆ ಏರುವುದಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಸೇರುವುದು ಸ್ಪಷ್ಟ ಎಂದ ಅವರು, ಕುಂದಾಪುರ ಪರಿವರ್ತನಾ ಸಮಾವೇಶದಲ್ಲಿ ಪಕ್ಷ ಸೇರೋದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಯಾವುದೇ ಶರತ್ತು ಹಾಕದೆ ಬಿಜೆಪಿ ಸೇರಿ, ನಿಷ್ಠಾವಂತ ಕಾರ‍್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದ ಅವರು, ನಾನು ಎಲ್ಲಿಯೂ ಯಾವುದನ್ನೂ ಅರ್ಜಿ ಹಾಕಿ ಪಡೆದಿಲ್ಲ. ಪಕ್ಷ ಸೇರಲು ಆಹ್ವಾನವಿದ್ದು, ಬಿಜೆಪಿ ಪರ ಕೆಲಸ ಮಾಡಿದ್ದೇನೆ. ತಾಂತ್ರಿಕ ಸಮಸ್ಯೆ ಪರಿಹಾರದ ನಂತರ ಬಿಜೆಪಿ ಸೇರೋದು ನಿಶ್ಚಯ. ಬೇರೆ ಪಕ್ಷಗಳಿಂದಲೂ ಆಹ್ವಾನ ಇತ್ತು ಎಂದರು.
ಬಿಜೆಪಿ ಮತ್ತೆ ಸೇರೋಲ್ಲ ಎಂದು ಹಿಂದೆ ಹೇಳಿಕೆ ನೀಡದ್ದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಂದಿನ ಕಾಲಸ್ಥಿತಿಯೇ ಬೇರೆ, ಇಂದಿನ ವಸ್ತುಸ್ಥಿತಿಯೇ ಬೇರೆ. ನಾನೇನು ಸಚಿವ ಸ್ಥಾನ ಆಕಾಂಕ್ಷಿಯಾಗಿರಲಿಲ್ಲ. ಆದರೂ ಹಿತೈಸಿಗಳ ಒತ್ತಡಕ್ಕೆ ಮಣಿದು ಬೆಂಗಳೂರಿಗೆ ಹೋಗಿದ್ದು, ಸಚಿವ ಸ್ಥಾನ ತಪ್ಪಿದ ಬಗ್ಗೆ ಹಿತೈಸಿಗಳು ಬೀದಿಗೆ ಇಳಿದಿದ್ದರೂ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಮಾಡದಂತೆ ವಿನಂತಿಸಿದ್ದೆ. ಹಾಗೇನಾದರೂ ಮಾಡಿದರೆ ಊರಿಗೆ ಮರಳುವುದಿಲ್ಲ ಎಂದು ಕೂಡಾ ಎಚ್ಚರಿಸಿದ್ದೆ. ಬಿಜೆಪಿ ಪಕ್ಷದ ಋಣ ನನ್ನ ಮೇಲಿದ್ದು, ಈ ಹಿನ್ನೆಲೆಯಲ್ಲಿ ಪಕ್ಷ ಸೇರುತ್ತಿದ್ದೇನೆ ಎಂದು ಹೇಳಿದರು.