ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾರ್ಟೂನಿಷ್ಠರಿಗೆ ವಿಶೇಷ ದೃಷ್ಠಿಕೋನವಿದೆ. ನಮಗೆ ಗೊತ್ತಿರುವುದು, ಗೊತ್ತಿಲ್ಲದ್ದು, ಒಳಿತು ಕೆಡುಕುಗಳನ್ನು ರೇಖೆಗಳ ಮೂಲಕ ತೋರಿಸುವ ಚಾಕಚಕ್ಯತೆ ಅವರಲ್ಲಿದೆ. ಸಮಾಜದ ಓರೆ ಕೋರೆಗಳನ್ನು ಚಿತ್ರಿಸಿ ದೇಶಕಟ್ಟುವ ಕೆಲಸದ ಅವರುಗಳ ಶ್ರಮ ವಿಶೇಷವಾದ್ದು ಎಂದು ತರಂಗ ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕಿ ಡಾ. ಸಂಧ್ಯಾ ಎಸ್. ಪೈ ಹೇಳಿದರು.
ವಿಭಿನ್ನ ಐಡಿಯಾಸ್ ಹಾಗೂ ಕಾರ್ಟೂನು ಕುಂದಾಪ್ರ ನೇತೃತ್ವದಲ್ಲಿ ಕುಂದಾಪುರ ಕಲಾಮಂದಿರಲ್ಲಿ ಆಯೋಜಿಸಲಾಗಿದ್ದ ಕಾರ್ಟೂನು ಹಬ್ಬ 2017 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪತ್ರಕರ್ತರ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ಮಾತನಾಡಿ ಕರಾವಳಿಯ ಮಣ್ಣಿಗೆ ಕಲೆಯ ಸೆಳೆತವಿದೆ. ಅದಕ್ಕೆ ತಕ್ಕಂತೆ ಪ್ರೋತ್ಸಾಹ ದೊರೆತರೆ ಅವರಲ್ಲಿನ ಪ್ರತಿಭೆ ಅನಾವರಣಗೊಳ್ಳುತ್ತದೆ. ಪೋರ್ಬ್ಸ್ ಪತ್ರಿಕೆಯಲ್ಲಿ ಕುಂದಾಪುರದ ಸತೀಶ್ ಆಚಾರ‍್ಯ ಅವರ ಹೆಸರು ಪ್ರಟಕವಾಗಿರುವುದೇ ಅವರ ಸಾಧನೆಯ ಮಟ್ಟವನ್ನು ತಿಳಿಸುತ್ತದೆ. ತಾನು ಬೆಳೆಯುವುದರೊಂದಿಗೆ ಇತರರನ್ನು ಬೆಳೆಸುವ ಅವರ ಗುಣ ಅವರನ್ನು ಈ ಮಟ್ಟಕ್ಕೆ ತಂದಿದೆ ಎಂದರು.
ಕುಂದಾಪ್ರ ಕನ್ನಡದ ಹಾಸ್ಯ ಕಲಾವಿದ, ಶಿಕ್ಷಕ ಮನು ಹಂದಾಡಿ ಮಾತನಾಡಿ ಸಾಹಿತ್ಯ ಕವಿತೆಯಲ್ಲಿ ಸಮಾಜ ತಿದ್ದುವ ಸಂದೇಶವಿರುವಂತೆ ಕಾರ್ಟೂನು ಕೂಡ ಗೆರೆಗಳ ಮೂಲಕ ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತದೆ. ಕಾರ್ಟೂನು ಎಲ್ಲಾ ದೃಷ್ಠಿಕೋನದಿಂದಲೂ ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರುತ್ತದೆ. ಕುಂದಾಪುರದ ಮಣಿಗೆ ವಿಶಿಷ್ಟ ಶಕ್ತಿಯಿದ್ದು ನಾಡಿಗೆ ಹಲವಾರು ಕಾರ್ಟೂನಿಷ್ಠರನ್ನು ನೀಡಿದೆ. ಕಾರ್ಟೂನುಗಳು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕೆಲಸವನ್ನು ಮಾಡುತ್ತದೆ.
ವ್ಯಂಗ್ಯಚಿತ್ರಕಾರ ಗಣೇಶ್ ಹೆಬ್ಬಾರ್ ಮಾತನಾಡಿ ಅಭಿರುಚಿವನ್ನು ಮುನ್ನಡೆಸುವವರು ಸಿಕ್ಕಾಗ ಕಲೆ ಬೆಳೆಯುತ್ತದೆ. ಕಾಲೇಜು ದಿನಗಳಲ್ಲಿ ಶೇಖರ್ ಅಜೆಕಾರು ಅವರ ಹಸ್ತಪತ್ರಿಕೆಯ ಮೂಲಕ ಆರಂಭಗೊಂಡ ಗೆರೆಗಳೊಂದಿಗಿನ ಪಯಣ ಇಲ್ಲಿನ ತನಕ ಮುಟ್ಟಿದೆ. ಸಮಾಜವನ್ನು ಸಮಭಾವದಿಂದ ನೋಡುವ ದೃಷ್ಠಿಕೋನದೊಂದಿಗೆ ಸಣ್ಣ ಪಂಚ್ ಹಾಗೂ ಖುಷಿ ಅರಳಿಸುವ ಕಲೆ ಕಾರ್ಟೂನಿಷ್ಠರಲ್ಲಿದ್ದ ಕಾರ್ಟೂನಿಗೂ ಒಂದು ಅರ್ಥ ಬರುತ್ತದೆ.
ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಗಣೇಶ್ ಐತಾಳ್, ಕಲಾವಿದ ಗಿರಿಧರ್ ಕಾರ್ಕಳವೇದಿಕೆಯಲ್ಲಿದ್ದರು. ಕಾರ್ಯಕ್ರಮದ ಸಂಘಟಕ ಸತೀಶ್ ಆಚಾರ‍್ಯ, ವ್ಯಂಗ್ಯಚಿತ್ರಕಾರರಾದ ಸಂತೋಷ್ ಸಸಿಹಿತ್ಲು, ಕೇಶವ ಸಸಿಹಿತ್ಲು, ಚಂದ್ರಶೇಖರ ಶೆಟ್ಟಿ, ರವಿಕುಮಾರ್ ಗಂಗೊಳ್ಳಿ ಅತಿಥಿಗಳನ್ನು ಗೌರವಿಸಿದರು. ವ್ಯಂಗ್ಯಚಿತ್ರಕಾರ ರಾಮಕೃಷ್ಣ ಹೇರ್ಳೆ ನಿರೂಪಿಸಿದರು.


















