ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ : ಇಲ್ಲಿನ ಶ್ರೀ ಕುಂದೇಶ್ವರ ದೇವಸ್ಥಾನ ದೀಪೋತ್ಸವಕ್ಕೆ ಸಹಸ್ರಾರು ಭಕ್ತರ ಸಾಕ್ಷಿಯಾದರು. ಶುಕ್ರವಾರ ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಿದ್ದು, ಸಂಜೆ ಪ್ರಣತಿ ದೀಪ ಬೆಳಗಿಸಲು ಸಹಸ್ರಾರು ಭಕ್ತರು ಕೈಜೋಡಿಸಿದರು. ಹಣತೆಯಿಂದ ಹಣತೆಗೆ ದೀಪ ಬೆಳಗಿಸಿ ಸಂಭ್ರಮಿಸಿದರು.
ಶ್ರೀ ಕುಂದೇಶ್ವರ ದೇವಸ್ಥಾನಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು, ಕುಂದೇಶ್ವರ ರಾಜ ದೇವಸ್ಥಾನ ಪ್ರತಿಷ್ಠಾಪನೆ ಮಾಡಿದ್ದರಿಂದ ಕುಂದೇಶ್ವರ ಎಂಬ ಹೆಸರು ಬರಲು ಕಾರಣ ಎಂಬ ನಂಬಿಕೆಯಿದೆ. ಪ್ರಾತಕಾಲ ಪೂಜೆ, ರುದ್ರಾಭಿಷೇಕ ಹಾಗೂ ಶಿವನಿಗೆ ಪ್ರಿಯವಾದ ವಿವಿಧ ಧಾರ್ಮಿಕ ಕಾರ‍್ಯಕ್ರಮ ನಡೆದಿದ್ದು, ಮಧ್ಯಾಹ್ನ ಮಹಾ ಅನ್ನಸಂತರ್ಣೆ ಕೂಡಾ ನಡೆಯಿತು.
ಕುಂದೇಶ್ವರ ದೇವಸ್ಥಾನ ಬೀದಿ ದೀಪಾಲಂಕೃತವಾಗಿದ್ದು, ದೇವಸ್ಥಾನಕ್ಕೆ ಅಳವಡಿಸಿದ ಬಣ್ಣದ ದೀಪಗಳಿಂದ ಮತ್ತಷ್ಟು ಮೆರಗು ಬಂದಿತ್ತು. ಕುಂದೇಶ್ವರ ದೇವಸ್ಥಾನ ಪುಷ್ಕ್ಕರಣಿಗೆ ವಿಶೇಷ ವಿದ್ಯುತ್ ದೀಪ ಅಲಂಕಾರ ಮಾಡಿದ್ದು, ಪುಸ್ಕರಣಿಗೊಂದು ಹೊಸ ಕಳೆ ಮೂಡಿಸಿತ್ತು. ಹಾಗೆ ದೇವಸ್ಥಾನ ಬಳಿ ಇರುವ ಅಶ್ವಥಕಟ್ಟೆ ಬಳಿ ನಿರ್ಮಿಸಿದ ಬೃಹತ್ ಆಂಜನೇಯ ಮೂರ್ತಿ ಎಲ್ಲರ ಆಕರ್ಷಿಣೀಯ ಬಿಂದು. ಪೇಟೆ, ಅಂಗಡಿ ಮುಂಗಟ್ಟಿಗೆ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು, ಸಂಜೆ ಕುಂದಾಪುರ ಪೇಟೆಗೆ ಹೊಸ ಬಣ್ಣ ನೀಡಿತ್ತು.