ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರಭುತ್ವದ ಆಶಯಕ್ಕೆ ವಿರುದ್ಧವಾದ ಅಭಿವ್ಯಕ್ತಿಯನ್ನು ದಮನ ಮಾಡುತ್ತೇವೆ ಎಂಬ ಅಧಿಕಾರಯುತವಾದ ಧೋರಣೆಯ ನಡುವೆ ವ್ಯಂಗ್ಯಚಿತ್ರವೆಂಬುದು ದೊಡ್ಡ ಸವಾಲೇ ಆಗಿದೆ. ಕ್ರೀಯಾತ್ಮಕ ಮನಸ್ಸುಗಳಿಂದ ಮಾತ್ರ ಪ್ರಭುತ್ವದ ಅಹಂಕಾರವನ್ನು ದುರಹಂಕಾರದ ಮಟ್ಟಕ್ಕೇರದಂತೆ ವಿನಂಭ್ರತೆಯತ್ತ ಕೊಂಡೊಯ್ಯುವ ದಾರಿ ಮಾಡಿಕೊಡಲು ಸಾಧ್ಯವಿದೆ ಎಂದು ಸಮುದಾಯ ಕರ್ನಾಟಕದದ ಜೊತೆ ಕಾರ್ಯದರ್ಶಿ ವಿಮಲ ಕೆ. ಎಸ್ ಹೇಳಿದರು.
ಶನಿವಾರ ಇಲ್ಲಿನ ಕಲಾಮಂದಿರದಲ್ಲಿ ವಿಭಿನ್ನ ಐಡಿಯಾಸ್ ಹಾಗೂ ಕಾರ್ಟೂನು ಕುಂದಾಪ್ರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಟೂನು ಹಬ್ಬದಲಿ ಸಮುದಾಯ ಕುಂದಾಪುರ ಸಹಯೋಗದೊಂದಿಗೆ ಹಮ್ಮಿಕೊಂಡ ಮಾಸ್ಟರ್ ಸ್ಟ್ರೋಕ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಭಿವ್ಯಕ್ತಿಯ ಜೊತೆಗೆ ಮೆದುವಾದ ಹಾಸ್ಯವನ್ನು ನೀಡುವ ಕುರುಂಬದಂತಿರುವ ಕಾರ್ಟೂನುಗಳ ಮೂಲಕ ಬಣ್ಣಗಳ ಪರಿಧಿಯನ್ನು ದಾಟಿ ಸಮಾಜದ ಅಂಕುಡೊಂಕುಗಳನ್ನು ತೋರಿಸುತ್ತಾ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದಕ್ಕೂ ಸಾಧ್ಯವಾಗಬೇಕಿದೆ. ಸೌಹಾರ್ದತೆ, ಸಮಾನತೆಯ ನಡುವೆ ಸಮಾನ ಸಂಬಂಧದ ಮನಸ್ಸುಗಳನ್ನು ಬೆಸೆಯುವ ಅಗತ್ಯವೂ ಇದೆ ಎಂಬದನ್ನು ಪ್ರತಿಪಾದಿಸಿದ ಅವರು, ಈ ಕ್ಷಣದ ಹಲವು ಘಟನೆಗಳಿಗೆ ತಕ್ಷಣ ಸ್ಪಂದಿಸುವ ವ್ಯಂಗ್ಯಚಿತ್ರಕಾರರು ತಮ್ಮ ತೃಪ್ತಿಗಾಗಿ ವ್ಯಂಗ್ಯಚಿತ್ರ ರಚನೆಯಲ್ಲಿ ತೊಡಗಿಕೊಳ್ಳದೆ ಸಮಾಜದ ಹಿತ ಕಾಯುವ ಉದ್ದೇಶ ಹೊಂದಿರುತ್ತಾರೆ ಎಂದರು.
ಮಾಸ್ಟರ್ ಸ್ಟ್ರೋಕ್‌ನಲ್ಲಿ ವ್ಯಂಗ್ಯಚಿತ್ರ ರಚಿಸಿದ ವ್ಯಂಗ್ಯಚಿತ್ರಕಾರರಾದ ಗುಜ್ಜಾರಪ್ಪ, ರಾಮಧ್ಯಾನಿ, ಜಯರಾಂ ಉಡುಪ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡು ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಪ್ರದೀಪ್‌ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ವ್ಯಂಗ್ಯಚಿತ್ರಕಾರ ಸುಬ್ರಹ್ಮಣ್ಯ ಮೇಗರವಳ್ಳಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಉದಯ ಗಾಂವಕರ್ ನಿರೂಪಿಸಿದರು. ಮಾಸ್ಟರ್ ಸ್ಟ್ರೋಕ್‌ಗೆ ನಟರಾಜ ಅರಳಸುರಳಿ ಸಮನ್ವಯಕಾರರಾಗಿದ್ದರು. ಕಾರ್ಟೂನಿಷ್ಠ್‌ರಾದ ರವಿಕುಮಾರ್ ಗಂಗೊಳ್ಳಿ ಪ್ರಶಸ್ತಿ ಪತ್ರ ವಾಚಿಸಿದರು, ಕೇಶವ ಸಸಿಹಿತ್ಲು, ಚಂದ್ರಶೇಖರ ಶೆಟ್ಟಿ ಹಾಗೂ ದಿನೇಶ್ ಸಿ ಹೊಳ್ಳ ಸಹಕರಿಸಿದರು. ಕಾಟೂನಿಷ್ಠ್ ಸತೀಶ್ ಆಚಾರ‍್ಯ ವಂದಿಸಿದರು.