ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ಸನ್ನಿಧಿಗೆ ಶ್ರೀಲಂಕಾ ಪ್ರಧಾನಿ ರೆನಿಲ್ ವಿಕ್ರಮ ಸಿಂಘೆ ಪತ್ನಿ ಡಾ. ಮೈತ್ರಿ ಹಾಗೂ ಕುಟುಂಬ ಸಮೇತರಾಗಿ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು.
ಶ್ರೀಲಂಕಾದಿಂದ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಅಲ್ಲಿಂದ ಮಂಗಳೂರು ಮೂಲಕ ಅರೆಶಿರೂರಿಗೆ ಹೆಲಿಕಾಪ್ಟರ್ ನಲ್ಲಿ ಬಂದಿಳಿದರು. ಪ್ರಧಾನಿ ವಿಕ್ರಮಸಿಂಘೆಯವರನ್ನು ಕೊಲ್ಲೂರು ಆಡಳಿತ ಮಂಡಳಿ ಅದ್ಧೂರಿಯಾಗಿ ಸ್ವಾಗತಿಸಿತು. ದೇವಸ್ಥಾನದ ಮುಂಭಾಗದಲ್ಲಿ ಕಾಲು ತೊಳೆದು ದೇವಸ್ಥಾನ ಮುಖ್ಯದ್ವಾರದ ಮೂಲಕ ಬಲಗಾಲಿಟ್ಟು ಪ್ರವೇಶಿಸಿದರು.
ಮಂತ್ರ ಪಠಣೆ ಮೂಲಕ ದೇವಾಲಯದ ಪ್ರಮುಖ ಅರ್ಚಕರು ಪ್ರಧಾನಿ ಮತ್ತು ಪತ್ನಿಯನ್ನು ಒಳಗೆ ಕರೆಸಿಕೊಂಡರು. ಗರುಡಗಂಭಕ್ಕೆ ನಮಸ್ಕರಿಸಿ ಮೂಕಾಂಬಿಕೆಯ ದರ್ಶನ ಮಾಡಿದ ಪ್ರಧಾನಿ, ಚಂಡಿಕಾ ಹೋಮ ಸೇರಿದಂತೆ ದೇವಸ್ಥಾನದ ಪ್ರಾಂಗಣದಲ್ಲಿರುವ ಎಲ್ಲಾ ಗುಡಿಗಳಿಗೆ ಭೇಟಿಕೊಟ್ಟು ಅರ್ಚನೆ ಸಲ್ಲಿಕೆ ಮಾಡಿದರು. ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಅರ್ಚಕರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಕೊಲ್ಲೂರು ಪರಿಸರದಲ್ಲಿ ವಿಶೇಷ ಭದ್ರತೆ ಒದಗಿಸಲಾಗಿತ್ತು. ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು. ಹಾಗೂ ಕೊಲ್ಲೂರಿನ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು.