ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸತ್ಸಂಗ ಬದುಕಿನ ವಿಕಸನಕ್ಕೆ ದಾರಿದೀಪವಾಗಿದೆ. ಸಮಾಜವಿಂದು ಉತ್ತಮ ಚಿಂತನೆಗಳಿಂದ ವಿಮುಖರಾಗುತ್ತಿರುವುದರಿಂದ ನಾನಾ ಸಂಕಷ್ಟಗಳಿಗೆ ಗುರಿಯಾಗುತ್ತಿದೆ. ಶಾಂತಿ ನೆಮ್ಮದಿ ತೃಪ್ತ ಭಾವವೇ ನಮ್ಮನ್ನು ಉನ್ನತಿಯೆಡೆಗೆ ಕೊಂಡೊಯ್ಯುವ ಶಕ್ತಿಯಾಗಿದೆ. ಇಂತಹ ಶಕ್ತಿ ಹರಿಕಥೆ, ಸತ್ಸಂಗಗಳಿಂದ ನಮಗೆ ಲಭಿಸುತ್ತದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಹರಿದಾಸರಾದ ಬಿ. ಸಿ. ರಾವ್ ಶಿವಪುರ ಹೇಳಿದರು.
ಅವರು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆಮನೆಯಲ್ಲಿ ನವೆಂಬರ್ ತಿಂಗಳ ಕಾರ್ಯಕ್ರಮದ ಅಂಗವಾಗಿ ಕೋಟೇಶ್ವರದ ಹರಿಹರ ಸೇವಾ ಬಳಗದ ಸಹಕಾರದೊಂದಿಗೆ ಆಯೋಜಿಸಿದ ಹರಿಕಥೆ ಸತ್ಸಂಗ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಕುಂದಾಪುರದ ಪ್ರಸಿದ್ಧ ವೈದ್ಯರಾದ ಡಾ. ಎಸ್, ಎನ್.ಪಡಿಯಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಕರಾದ ಕೋಣಿ ನರಸಿಂಹ ಪೂಜಾರಿ, ಶ್ರೀಮತಿ ಲಕ್ಷ್ಮೀ ನರಸಿಂಹ ಪೂಜಾರಿ ಅವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ನಿವೃತ್ತ ಅಧ್ಯಾಪಕರಾದ ಹರಿಶ್ಚಂದ್ರ ಹೆಬ್ಬಾರ್, ಕೋಟೇಶ್ವರ ಹರಿಹರ ಸೇವಾ ಬಳಗದ ಅಧ್ಯಕ್ಷ ಎನ್. ಮೋಹನ್ ಆಚಾರ್ಯ, ಗೊಂಬೆಯಾಟದ ಹಿರಿಯ ಕಲಾವಿದರಾದ ಯು.ವಾಮನ್ ಪೈ ಹೆಮ್ಮಾಡಿ, ಸುದ್ದಿಮನೆ ಸಂಪಾದಕರಾದ ಸಂತೋಷ್ ಕೋಣಿ, ಅಕಾಡೆಮಿ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅನಂತರ ಕೃಷ್ಣಂ ವಂದೇ ಜಗದ್ಗುರುಂ ಹರಿಕಥಾ ಸತ್ಸಂಗ ಗೋಷ್ಠಿ ಜರುಗಿತು. ಶಿಕ್ಷಕ ಉದಯ ಭಂಡಾರ್‌ಕಾರ್ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ಶೆಣೈ, ಗಂಗೊಳ್ಳಿ, ಮಂಜುನಾಥ ಮೈಪಾಡಿ ಸಹಕರಿಸಿದರು.