ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪ್ರತಿಯೊಬ್ಬ ಕಲಾವಿದರು ತಮ್ಮ ಕ್ಷೇತ್ರದಲ್ಲಿ ಉತ್ತುಂಗಕ್ಕೇರಿದಾಗ ಆ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಜನರು ಗುರುತಿಸಿ ಗೌರವಿಸುತ್ತಾರೆ. ಆದರೆ ಯಾವ ಕಲಾವಿದರೂ ಕಲೆಗೆ ಕೊಡುವುದು ಏನೂ ಇಲ್ಲ. ಅರ್ಹತೆಗಿಂತ ಶ್ರದ್ಧಾಭಕ್ತಿಯಿಂದ ಮಾಡುವ ಕರ್ತವ್ಯ ಮುಖ್ಯ. ಕಲೆಯಿಂದ ಪಡೆದು ತಾವು ಬೆಳವಣಿಗೆ ಸಾಧಿಸುತ್ತಾರೆ. ಕಲಾವಿದರ ಉತ್ಕೃಷ್ಟ ಸೇವೆಯನ್ನು ಗುರುತಿಸಿ ಗೌರವಿಸಿದಾಗ ಕಲೆಗೆ ನಿಜವಾದ ಗೌರವ ನೀಡಿದಂತಾಗುತ್ತದೆ ಎಂದು ಖ್ಯಾತ ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಹೇಳಿದರು.
ಹೆರಗುಡಿ ಬಲಮುರಿ ಸಿದ್ಧಿವಿನಾಯಕ ದೇವಸ್ಥಾನದ ವಠಾರದಲ್ಲಿ ಬುಧವಾರ ರಾತ್ರಿ ಜರುಗಿದ ಸಮಾರಂಭದಲ್ಲಿ ಯಳಜಿತ ಗ್ರಾಮದ ಹೆರಗುಡಿ ಪುಂಡರೀಕ ಭಟ್ ಮತ್ತು ಸಹೋದರರ ಆಯೋಜಕತ್ವದಲ್ಲಿ ಅರೆಶಿರೂರು ರಾಮಚಂದ್ರ ಭಟ್ ಸಂಸ್ಮರಣಾರ್ಥ ನೀಡಲಾದ 2017ನೇ ಸಾಲಿನ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು. ಭಾರತೀಯ ಜೀವವಿಮಾ ನಿಗಮದ ಮಂಗಳೂರು ಶಾಖೆಯ ಮುಖ್ಯ ಪ್ರಬಂಧಕ ಎಚ್. ರಾಧಾಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿ ಯಕ್ಷಗಾನ ಭಾಗವತ ಹೇರಂಜಾಲು ಗೋಪಾಲ ಗಾಣಿಗ, ಧಾರ್ಮಿಕ ಚಿಂತಕ ಮಂಗೇಶ್ ಶೆಣೈ, ಕೊಂಡದಕುಳಿ ಅವರ ಪತ್ನಿ ಚೇತನಾ ಆರ್. ಹೆಗಡೆ, ಯೋಗಿನಿ ಪಿ. ಭಟ್, ಕೆನರಾ ಬ್ಯಾಂಕ್ ನಿವೃತ್ತ ಮುಖ್ಯಪ್ರಬಂಧಕ ಎ. ಪುಂಡರೀಕ ಭಟ್, ಶ್ರೀಧರ ಭಟ್, ಲಕ್ಷ್ಮೀನಾರಾಯಣ ಭಟ್ ಮೊದಲಾದವರು ಉಪಸ್ಥಿತರಿದ್ದರು. ಬಲಮುರಿ ಸಿದ್ಧಿವಿನಾಯಕ ದೇವಸ್ಥಾನದ ಅರ್ಚಕ ಜಗದೀಶ್ ಭಟ್ ಹೆರಗುಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಣೇಶ್ ಭಟ್ ಸನ್ಮಾನ ಪತ್ರ ವಾಚಿಸಿದರು. ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಕಾರ್ಯಕ್ರಮ ನಿರ್ವಹಿಸಿದರು. ಗಜಾನನ ಉಡುಪ ಹರವರಿ ವಂದಿಸಿದರು. ಸಮಾರಂಭದ ಬಳಿಕ ಕೋಟ ಅಮೃತೇಶ್ವರೀ ಮೇಳದವರಿಂದ ಯಕ್ಷಗಾನ ಪ್ರದರ್ಶನ ಜರುಗಿತು.