ಡಿ.9ರಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಇಂಟೆಕ್ ಸಮಾವೇಶ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ವಿಧಾಸಭಾ ಕ್ಷೇತ್ರ ಕಾರ್ಮಿಕರ ಒಗ್ಗೂಡಿಸುವಿಕೆ ಮತ್ತು ಕಾರ್ಮಿಕರಿಗೆ ಸರಕಾರದಿಂದ ನೀಡಲಾಗುತ್ತಿರುವ ಸಲವತ್ತುಗಳ ಬಗೆಗೆ ಅರಿವು ಮೂಡಿಸುವ ಉದ್ದೇಶದಿಂದ ಡಿ.9ರಂದು ಇಲ್ಲಿನ ಆರ್.ಎನ್ ಶೆಟ್ಟಿ ಸಭಾಂಗಣದಲ್ಲಿ ವಿಧಾಸಭಾ ಕ್ಷೇತ್ರದ ಇಂಟೆಕ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಇಂಟೆಕ್ (ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್) ಅಧ್ಯಕ್ಷ ರಾಕೇಶ್ ಮಲ್ಲಿ ಹೇಳಿದರು.
ಕುಂದಾಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನ ಇಂಟೆಕ್ಸಂಘಟನೆಯ ಮೂಲಕ ಕಾರ್ಮಿಕರ ಕುಂದು ಕೊರತೆಗಳನ್ನು ಆಲಿಸುವ ಕೆಲಸ ನಿರಂತವಾಗಿ ನಡೆಯುತ್ತಿದೆ. ಕಳೆದ ನಾಲ್ಕೂವರೆ ವರ್ಷಗಳಿಂದ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ಸರಕಾರದಿಂದ ದೊರಕಿಸಿ ಕೊಡಬೇಕಾದ ಸವಲತ್ತುಗಳನ್ನು ನೇರವಾಗಿ ದೊರೆಯುವಲ್ಲಿ ಶ್ರಮಿಸಲಾಗುತ್ತಿದೆ. ರಾಜ್ಯ ಕಾಂಗ್ರೆಸ್ ಸರಕಾರವೂ ದುಡಿಯುವ ವರ್ಗದ ಶ್ರೇಯೋಭಿವೃದ್ಧಿಗೆ ಹಲವಾರು ಜನಪ್ರಿಯ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಸಮಾವೇಶದ ಮೂಲಕ ಕಾರ್ಮಿಕರಿಗೆ ದೊರೆಯುತ್ತಿರುವ ಸವಲತ್ತುಗಳ ಬಗೆಗೆ ಮಾಹಿತಿ ನೀಡಲಾಗುವುದು ಎಂದವರು ತಿಳಿಸಿದರು.
ಸಮಾವೇಶವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಇವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಗಣಿ ಮತ್ತು ಭೂಸ್ವಾಧೀನ ಸಚಿವ ವಿನಯ ಕುಲಕರ್ಣಿ, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ, ಶಾಸಕ ವಿನಯಕುಮಾರ್ ಸೊರಕೆ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ಪಕ್ಷದ ಪ್ರಮುಖರಾದ ಮಾಣಿ ಗೋಪಾಲ, ಸದಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.