ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು : ಮರವಂತೆ ಮಾರಿಕಾಂಬಾ ದೇವಸ್ಥಾನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ವಾಸ್ತು ತಜ್ಞ, ಪ್ರಸಂಗ ಕರ್ತ ಬಸವರಾಜ ಶೆಟ್ಟಿಗಾರ್ ಅವರು ಬರೆದ ’ಮರವಂತೆ ಮಾರಿಕಾಂಬಾ ಮಹಾತ್ಮೆ’ ಎಂಬ ಯಕ್ಷಗಾನ ಪ್ರಸಂಗದ ಬಿಡುಗಡೆ ನಡೆಯಿತು. ಮಹಾರಾಜಸ್ವಾಮಿ ವರಾಹ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಾಮಚಂದ್ರ ಹೆಬ್ಬಾರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ಗೋಪಾಲ ಪೂಜಾರಿ ಧಾರ್ಮಿಕ ಕೇಂದ್ರದ ಇತಿಹಾಸ ಮತ್ತು ಸ್ಥಳಪುರಾಣವನ್ನು ಆಧಾರವಾಗಿಟ್ಟುಕೊಂಡು ಯಕ್ಷಗಾನ ಪ್ರಸಂಗ ರಚಿಸಿದರೆ ಅದಕ್ಕೆ ಭಾರಿ ಜನಪ್ರಿಯತೆ ಲಭಿಸಿದ ಉದಾಹರಣೆಗಳಿವೆ. ಕ್ಷೇತ್ರದ ಪ್ರಚಾರ ಮತ್ತು ಧಾರ್ಮಿಕ ಶ್ರದ್ದೆಯ ಉದ್ದೀಪನವೂ ಅದರಿಂದ ನಡೆಯುತ್ತದೆ ಎಂದರು. ಶೆಟ್ಟಿಗಾರರ ೫೦ನೆ ಪ್ರಸಂಗವಾಗಿ ಮೂಡಿಬಂದ ಪ್ರಸ್ತುತ ಪ್ರಸಂಗವು ಯಶಸ್ವಿಯಾಗಲಿ ಎಂದು ಹಾರೈಸಿದರು.
ದೇವಳ ಸಮಿತಿ ಅಧ್ಯಕ್ಷ ನರಸಿಂಹ ದೇವಾಡಿಗ ಸ್ವಾಗತಿಸಿದರು. ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟಟಿ ಅಭಿನಂದನ ಭಾಷಣ ಮಾಡಿದರು. ಪ್ರಸಂಗಕರ್ತ ಶೆಟ್ಟಿಗಾರ್, ಕೆ. ಗೋಪಾಲ ಪೂಜಾರಿ, ಸಹಕಾರಿ ಧುರೀಣ ಎಸ್. ರಾಜು ಪೂಜಾರಿ, ತಾಲ್ಲೂಕು ಪಂಚಾಯಿತಿ ಸದಸ್ಯ ರಾಜು ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಧರ್ಮದರ್ಶಿ ತಿಮ್ಮ ವಿ. ದೇವಾಡಿಗ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಆರ್. ಕೆ, ರಾಮಮಂದಿರ ಸಮಿತಿ ಅಧ್ಯಕ್ಷ ವೆಂಕಟರಮಣ ಗಾಣಿಗ, ದೇವಾಲಯದ ಪದಾಧಿಕಾರಿಗಳಾದ ನಾರಾಯಣ ದೇವಾಡಿಗ, ಗೋಪಾಲ ದೇವಾಡಿಗ ಇದ್ದರು. ಸಭೆಯ ಬಳಿಕ ಸೌಕೂರು ಮೇಳದವರು, ಬಿಡುಗಡೆಗೊಂಡ ಪ್ರಸಂಗವನ್ನು ಪ್ರದರ್ಶಿಸಿದರು.