ಬೈಂದೂರು: ಇಂದು ಮಕ್ಕಳಿಗೆ ಅವಕಾಶಗಳು ವಿಪುಲವಾಗಿ ದೊರೆಯುತ್ತಿದ್ದು ಅದನ್ನು ಸದ್ಭಳಕೆ ಮಾಡಿಕೊಂಡಲ್ಲಿ ಭವಿಷ್ಯದಲ್ಲಿ ಯಶಸ್ಸನ್ನು ಕಾಣಬಹುದಾಗಿದೆ ಎಂದು ಬೈಂದೂರು ಜೀವ ವಿಮಾ ಅಧಿಕಾರಿ ಸೋಮನಾಥನ್ ಆರ್ ಹೇಳಿದರು.
ಅವರು ಬೈಂದೂರು ರಥೋತ್ಸವದ ಅಂಗವಾಗಿ ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಕಲಾ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಿರುವ ‘ಸುರಭಿ ಕಲಾಸಿರಿ’ ಸಾಂಸ್ಕೃತಿಕ ವೈಭವದಲ್ಲಿ ಜರುಗಿದ ರಂಗೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು..
ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮಕ್ಕಳು ಎಲ್ಲಾ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಇಂತಹ ಮಕ್ಕಳಿಗೆ ವೇದಿಕೆಯಾಗುವಲ್ಲಿ, ಕಲೆ, ಸಂಸ್ಕೃತಿ, ಸಾಹಿತ್ತಿಕವಾದ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಮುಂಚೂಣಿಯಲ್ಲಿರುವ ಸುರಭಿ ಬೈಂದೂರಿನ ಸಾಂಸ್ಕೃತಿಕ ರಾಯಭಾರಿಯಾಗಿದೆ ಎಂದವರು ಪ್ರಶಂಸಿಸಿದರು.
ಬೈಂದೂರು ಗ್ರಾ.ಪಂ ಅಧ್ಯಕ್ಷ ಜನಾರ್ಧನ ಯು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುರಭಿ ನಿರ್ದೇಶಕ ಸುಧಾಕರ ಪಿ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುರಭಿಯ ಅಧ್ಯಕ್ಷ ಶಿವರಾಮ ಕೊಠಾರಿ ಸ್ವಾಗತಿಸಿ, ಕಾರ್ಯದರ್ಶಿ ಲಕ್ಷ್ಮಣ ಕೊರಗ ವಂದಿಸಿದರು. ಸುರಭಿಯ ನಿರ್ದೇಶಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಭೂಮಿಕಾ ರಿ. ಹಾರಾಡಿ ತಂಡದಿಂದ ಪ್ರೊ. ವಸಂತ ಬನ್ನಾಡಿ ರೂಪಾಂತರಿಸಿ, ಬಿ. ಎಸ್. ರಾಮ್ ಶೆಟ್ಟಿ ಹಾರಾಡಿ ನಿರ್ದೇಶಿಸಿದ ‘ಅಗ್ನಿಲೋಕ’ ನಾಟಕ ಪ್ರದರ್ಶನಗೊಂಡಿತು.