ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಧರ್ಮ ಪಾಲನೆ, ಸತ್ಯದ ಹಾದಿ ಹಾಗೂ ಉತ್ತಮ ನಡೆ ನುಡಿಯ ಮೂಲಕ ನಮ್ಮೊಳಗಿನ ದೇವರನ್ನು ಶುದ್ಧವಾಗಿರಿಸಿಕೊಂಡರೆ ಬದುಕಿನಲ್ಲಿ ನೆಮ್ಮದಿಯನ್ನು ಕಾಣಲು ಸಾಧ್ಯ. ನೆಮ್ಮದಿದ್ದರೆ ಆತ್ಮವಿಶ್ವಾಸ ಬೆಳೆಯುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ಉಪ್ಪುಂದ ರಾಣಿಬಲೆ ಮೀನುಗಾರ ಒಕ್ಕೂಟದಿಂದ ಕೊಡಮಾಡಿದ ನೂತನ ಬೆಳ್ಳಿರಥವನ್ನು ಸಮರ್ಪಿಸಿದ ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶಿರ್ವಚನವಿತ್ತರು.
ತಂದೆ ತಾಯಿ ನಮ್ಮನ್ನು ಸಲಹಿದ ರೀತಿಯಲ್ಲಿಯೇ ಪ್ರಕೃತಿಯೂ ನಮ್ಮನ್ನು ಸಲಹುತ್ತದೆ. ನಮ್ಮ ಇತಿಮಿತಿಯ ಎಲ್ಲೆ ಮೀರಿ ವರ್ತಿಸಿದರೆ ಪ್ರಕೃತಿ ವಿಕೋಪದಂತಹ ಅವಘಡಗಳು ಸಂಭವಿಸುತ್ತವೆ. ನಮ್ಮ ಪರಿಧಿಯಲ್ಲಿ ಶ್ರದ್ಧೆ, ಸತ್ಯ, ಧರ್ಮದಿಂದ ನಡೆದಾಗ ಎಲ್ಲವೂ ನಮಗೆ ಪೂರಕವಾಗಿರುತ್ತದೆ ಎಂದರು.
ಯೋಚನೆ ಮಾಡಿ ದಾನ ಮಾಡಿದರೆ ಅದರಿಂದ ದೊರೆಯಬೇಕಾದ ಪುಣ್ಯಫಲ ದೊರೆಯದು. ಶ್ರಿಮಂತರು ಕಟ್ಟಿದ ದೇವಸ್ಥಾನಗಳು ಹೆಚ್ಚು ಕಾಲ ಉಳಿಯದು. ಫಲಾಪೇಕ್ಷೆ ಇಲ್ಲದ ದಾನ, ಭಕ್ತರು ಕಟ್ಟಿದ ದೇವಸ್ಥಾನ ಎಂದಿಗೂ ಶಾಶ್ವತವಾಗಿ ಉಳಿದ ಉತ್ತಮ ಫಲ ನೀಡುತ್ತದೆ ಎಂದ ಅವರು ಉಪ್ಪುಂದ ರಾಣಿಬಲೆ ಮೀನುಗಾರರು ಶ್ರದ್ಧಾ ಭಕ್ತಿಯಿಂದ ಕೊಡುಗೆಯಿತ್ತ ಬೆಳ್ಳಿರಥವನ್ನು ಸಂತೋಷದಿಂದ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಸಮರ್ಪಿಸಿದ್ದೇನೆ ಎಂದರು.
ರಾಣಿಬಲೆ ಮೀನುಗಾರರ ಒಕ್ಕೂಟ ಉಪ್ಪುಂದ ಇದರ ಅಧ್ಯಕ್ಷ ವೆಂಕಟರಮಣ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟವಾಡಿ, ವಿಶೇಷ ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ, ರಥಶಿಲ್ಪಿ ಬಿ. ಲಕ್ಷ್ಮೀನಾರಾಯಣ ಆಚಾರ್ಯ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ತಂತ್ರಿ ಮಂಜುನಾಥ ಅಡಿಗ ಕೊಲ್ಲೂರು, ಪ್ರಧಾನ ಅರ್ಚಕ ಪ್ರಕಾಶ ಉಡುಪ, ರಾಜ್ಯ ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಸಮಿತಿ ಸದಸ್ಯ ಎಸ್.ಮದನ ಕುಮಾರ್ ಉಪ್ಪುಂದ, ಉಪ್ಪಂದ ಅರಮಕೋಡಿ ಶ್ರೀ ಈಶ್ವರ ದೇವಸ್ಥಾನದ ಅಧ್ಯಕ್ಷ ಬಿ. ಶ್ರೀಧರ, ಉಪ್ಪುಂದ ಖಾರ್ವಿ ಯಾನೆ ಹರಿಕಾಂತ ಮಹಾಜನ ಸಂಘದ ಅಧ್ಯಕ್ಷ ಡಿ. ರಾಮಚಂದ್ರ ಖಾರ್ವಿ, ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಸೋಮಶೇಖರ ಖಾರ್ವಿ, ಕೊಡೇರಿ ಶ್ರೀ ರಾಮ ಸೇವಾ ಸಮಿತಿ ಅಧ್ಯಕ್ಷ ಕೇಶವ ಖಾರ್ವಿ, ಮರವಂತೆ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ವೆಂಕಟರಮಣ ಖಾರ್ವಿ, ರಾಣಿಬಲೆ ಮೀನುಗಾರರ ಒಕ್ಕೂಟದ ಉಪಾಧ್ಯಕ್ಷ ತಿಮ್ಮಪ್ಪ ಖಾರ್ವಿ, ಕೋಶಾಧಿಕಾರಿ ಮಾಧವ ಖಾರ್ವಿ, ಕಾರ್ಯದರ್ಶಿ ಡಿ. ಮೋಹನ ಖಾರ್ವಿ, ಜೊತೆ ಕಾರ್ಯದರ್ಶಿ ಮಂಜುನಾಥ ಜಿ. ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.
ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು ಅಭಿನಂದಿಸಲಾಯಿತು. ಈ ಸಂದರ್ಭ ರಥಶಿಲ್ಪಿ ಬಿ. ಲಕ್ಷ್ಮೀನಾರಾಯಣ ಆಚಾರ್ಯ, ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟದ ಅಧ್ಯಕ್ಷ ವೆಂಕಟರಮಣ ಖಾರ್ವಿ ಅವರನ್ನು ಸನ್ಮಾನಿಸಲಾಯಿತು.