ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೆಸುಗೆ ಫೌಂಡೇಶನ್ ರಿ. ಬೈಂದೂರು, ಗ್ರಾಮ ಪಂಚಾಯತ್ ಪಡುವರಿ, ಉಡುಪಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಬೈಂದೂರು ಸೋಮೇಶ್ವರ ಬೀಚ್ನಲ್ಲಿ ಡಿಸೆಂಬರ್ 28 ಹಾಗೂ 29ರಂದು ಬೈಂದೂರು ಬೀಚ್ ಉತ್ಸವ ಜರುಗಲಿರುವ ಬೀಚ್ ಉತ್ಸವಕ್ಕೆ ಕೊನೆ ಕ್ಷಣದ ಸಿದ್ಧತೆಗಳು ಜರುಗುತ್ತಿವೆ. ಬೈಂದೂರಿನಲ್ಲಿ ಪ್ರಪ್ರಥಮ ಭಾರಿಗೆ ಆಯೋಜನೆಗೊಂಡಿರುವ ಬೈಂದೂರು ಬೀಚ್ ಉತ್ಸವಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನ ದೊರೆಯುತ್ತಿದ್ದು, ಪಡುವರಿ ಸೋಮೇಶ್ವರ ಕಡಲತೀರ ಸಿಂಗರಿಸಿಕೊಳ್ಳುತ್ತಿದೆ.
ಉತ್ಸವಕ್ಕಾಗಿ ಬೀಚ್ ಪರಿಸರವನ್ನು ಸ್ವಚ್ಛಗೊಳಿಸಲಾಗಿದ್ದು, ವೇದಿಕೆ, ಪ್ರದರ್ಶನ ಮಳಿಗೆಗಳು, ಅಮ್ಯೂಸ್ ಮೆಂಟ್ ಪಾರ್ಟ್ ಮುಂದಾದವುಗಳ ಜೋಡಣೆಯ ಅಂತಿಮ ಹಂತದ ಸಿದ್ಧತೆ ನಡೆದಿದೆ. ಸೋಮೇಶ್ವರದಿಂದ ಅಳಿವೆಯ ತನಕ ವಿದ್ಯುದೀಪಗಳ ಅಲಂಕಾರ, ಬಣ್ಣದ ಚಿತ್ತಾರದಿಂದ ಬೀಚ್ ಪರಿಸರ ಶುಭ್ರವಾಗಿ ಕಂಗೊಳಿಸುತ್ತಿದೆ.
ದಿ. 28 ಡಿಸೆಂಬರ್ 2017ರ ಗುರುವಾರ ಬೆಳಿಗ್ಗೆ 9 ಗಂಟೆಗೆ ಗಾಳಿಪಟ ಉತ್ಸವ ಸ್ವರ್ಧೆಗೆ ಚಾಲನೆ, 9:30ಕ್ಕೆ ಸೂಪರ್ ಸೆಲ್ಫಿ ಸ್ವರ್ಧೆಗೆ ಚಾಲನೆ, 10ಗಂಟೆಗೆ ಮರಳುಶಿಲ್ಪ ಅನಾವರಣ, 10:30ಕ್ಕೆ ಚಿತ್ರಸಿರಿ, ಚಿತ್ರಕಲಾ ಸ್ವರ್ಧೆ ಹಾಗೂ ಪ್ರದರ್ಶನ ಮಳಿಗೆ ಉದ್ಘಾಟನೆ, 11:00 ತಾರಾಪತಿ ಅಳುವೆಕೋಡಿಯಲ್ಲಿ ಕ್ರೀಡೋತ್ಸವ ಉದ್ಘಾಟನೆ (ಪುರುಷರಿಗೆ ತಾಲೂಕು ಮಟ್ಟದ ಸ್ವರ್ಧೆಗಳು), ಸಂಜೆ 4ರಿಂದ ಕೋಟೆಬಾಗಿಲು ಹಾಗೂ ಬೈಂದೂರು ಶಾಲಾ ಮಕ್ಕಳಿಂದ ನೃತ್ಯ ಕಾರ್ಯಕ್ರಮ, 5ಕ್ಕೆ ಸವಿ ಸವಿ ನೆನಪು ಕಲಾತಂಡದಿಂದ ಸುಮಧುರ ಸಂಗೀತ, 5:30ಕ್ಕೆ ಗಾನ ನೃತ್ಯ ವೈಭವ ಮ್ಯೂಸಿಕಲ್ ಪಬ್ಲಿಸಿಟಿಯಿಂದ ಕಾರ್ಯಕ್ರಮ, 6:30ಕ್ಕೆ ಚಂದ್ರ ಬಂಕೇಶ್ವರ್ ಮತ್ತು ಸುಮಧುರ ಸಂಜೆ ಸಂಗೀತ, 7ಕ್ಕೆ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ಉದ್ಘಾಟನೆ, ರಾತ್ರಿ 8ರಿಂದ ಉಡುಪಿ ಭಾರ್ಗವಿ ನೃತ್ಯ ತಂಡದಿಂದ ಸಾಂಸ್ಕೃತಿಕ ರಸಸಂಜೆ ಕಾರ್ಯಕ್ರಮ ನಡೆಯಲಿದೆ. ಡಿ.28ರಿಂದ ಜನವರಿ 1ರ ತನಕ ಅಮ್ಯೂಸಮೆಂಟ್ ಪಾರ್ಕ್, ದೋಣಿ ವಿಹಾರ ಹಾಗೂ ಆಹಾರೋತ್ಸವ ಮುಂದುವರಿಯಲಿದೆ.
ದಿ. 29 ಡಿಸೆಂಬರ್ 2017ರ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ತಾಲೂಕು ಮಟ್ಟದ ಯೋಗ ಸ್ವರ್ಧೆಗೆ ಚಾಲನೆ, 10ಕ್ಕೆ ಮಹಿಳೆಯರಿಗಾಗಿ ಆಯೋಜಿಸಲಾದ ವಿವಿಧ ಗ್ರಾಮೀಣ ಸ್ಪರ್ಧೆ ಹಾಗೂ ಅಡುಗೆ ಸ್ವರ್ಧೆಗೆ ಚಾಲನೆ, ಸಂಜೆ 4ರಿಂದ ತಾರಾಪತಿ ಹಾಗೂ ದೊಂಬೆ ಶಾಲಾ ಮಕ್ಕಳು ಹಾಗೂ ರಾಮಕ್ಷತ್ರಿಯ ಮಾತೃಮಂಡಳಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ 5:30ರಿಂದ ಬೈಂದೂರು ನೃತ್ಯ ಸುರಭಿ ಕಲಾಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ, 6ಕ್ಕೆ ಸೂರ್ಯನಮಸ್ಕಾರದಲ್ಲಿ ಗಿನ್ನಿಸ್ ದಾಖಲೆ ಬರೆದ ನಿರಂಜನ ಶೆಟ್ಟಿ ಅವರಿಂದ ಯೋಗ ಪ್ರದರ್ಶನ, 7ಕ್ಕೆ ಬೀಚ್ ಉತ್ಸವದ ಸಮಾರೋಪ ಸಮಾರಂಭ, ರಾತ್ರಿ 8ರಿಂದ ಬೆಂಗಳೂರು ಸಂಗೀತ ಸರ್ಗಮ್ ತಂಡದಿಂದ ಸಾಂಸ್ಕೃತಿಕ ಸೌರಭ, ರಾತ್ರಿ ಕಣ್ಮನ ತಣಿಸುವ ಸಿಡಿಮದ್ದು ಪ್ರದರ್ಶನ ನಡೆಯಲಿದೆ.
ಸ್ವರ್ಧೆಗಳು:
ದಿ. 28 ಡಿಸೆಂಬರ್ 2017ರ ಗುರುವಾರ ಗಾಳಿಪಟ ಸ್ವರ್ಧೆ ಪ್ರಾಥಮಿಕ, ಮಾಧ್ಯಮಿಕ ಹಾಗೂ ಮುಕ್ತ ವಿಭಾಗದಲ್ಲಿ ನಡೆಯಲಿದೆ. ಸುಪರ್ ಸೆಲ್ಫಿ ಸ್ವರ್ಧೆ ವೈಯಕ್ತಿಯ ಹಾಗೂ ಗುಂಪು ಸ್ವರ್ಧೆ ವಿಭಾಗದಲ್ಲಿ ಸಾರ್ವಜನಿಕರಿಗಾಗಿ ನಡೆಯಲಿದೆ. ಪ್ರಾಥಮಿಕ, ಮಾಧ್ಯಮಿಕ ಹಾಗೂ ಮುಕ್ತ ವಿಭಾಗದಲ್ಲಿ ಚಿತ್ರಕಲಾ ಸ್ವರ್ಧೆ ನಡೆಯಲಿದೆ. ಪುರುಷರಿಗಾಗಿ ತಾರಾಪತಿ ಅಳುವೆಕೋಡಿಯಲ್ಲಿ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ ನಡೆಯಲಿದೆ.
ದಿ. 28 ಡಿಸೆಂಬರ್ 2017ರ ಶುಕ್ರವಾರ ಪ್ರಾಥಮಿಕ, ಪೌಡಶಾಲಾ ಹಾಗೂ ಮುಕ್ತ ವಿಭಾಗದಲ್ಲಿ ಬೈಂದೂರು ತಾಲೂಕು ಮಟ್ಟದ ಯೋಗ ಸ್ವರ್ಧೆ, ಮಹಿಳೆಯರಿಗಾಗಿ ಮಡಿಲು ನೇಯುವ ಸ್ವರ್ಧೆ, ಹೂಮಾಲೆ ಕಟ್ಟುವ ಸ್ವರ್ಧೆ, ರಂಗೋಲಿ ಸ್ವರ್ಧೆ ಹಾಗೂ ಅಡುಗೆ ಸ್ವರ್ಧೆ ಸೇರಿದಂತೆ ವಿವಿಧ ಸ್ವರ್ಧೆಗಳು ನಡೆಯಲಿದೆ.