ಬೈಂದೂರು: ಕಲ್ಲೆದೆಯನ್ನೂ ಕರಗಿಸುವ, ದ್ವೇಷವನ್ನು ದಹಿಸುವ ಶಕ್ತಿ ಇರುವುದು ಕಲೆಗೆ ಮಾತ್ರ. ಕಲಾಕಾರರು ಆನಂದದ ಲಹರಿಯನ್ನು ಹರಿಸಿ, ಪ್ರೀತಿಯನ್ನು ಬಿತ್ತುವ ಶಾಂತಿದೂತರು ಎಂದು ಬೈಂದೂರು ರತ್ತೂಬಾಯಿ ಹೈಸ್ಕೂಲ್ ನ ಮುಖ್ಯೋಪಧ್ಯಾಯ ಜಿ. ಎಸ್. ಭಟ್ ಹೇಳಿದರು.
ಅವರು ಬೈಂದೂರು ರಥೋತ್ಸವದ ಅಂಗವಾಗಿ ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಕಲಾ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಿರುವ ‘ಸುರಭಿ ಕಲಾಸಿರಿ’ ಸಾಂಸ್ಕೃತಿಕ ವೈಭವದಲ್ಲಿ ಮೂರನೇ ದಿನ ಜರುಗಿದ ಯಕ್ಷೋತ್ಸವದ ಸಭಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.
ಎಲ್ಲಿ ಕಲೆ, ಸಾಹಿತ್ಯ, ಸಂಗೀತಕ್ಕೆ ಪ್ರೋತ್ಸಾಹ ಸಿಗುವುದಿಲ್ಲವೋ ಅಲ್ಲಿ ಅದರ ಉಳಿವು ಸಾಧ್ಯವಿಲ್ಲ. ಬೈಂದೂರಿನ ಸುರಭಿ ಸಂಸ್ಥೆಯು ಸತತವಾಗಿ ಕಲೆಯನ್ನು ಅರಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನಾರ್ಹ ಎಂದವರು ನುಡಿದರು.
ಅತಿಥಿಯಾಗಿದ್ದ ಜಿ.ಪಂ. ಸದಸ್ಯೆ ಸುಪ್ರಿತಾ ದೀಪಕ್ ಶೆಟ್ಟಿ ಮಾತನಾಡಿ ಬೈಂದೂರಿನ ಸಾಂಸ್ಕೃತಿಕ ಲೋಕಕ್ಕೆ ಅನನ್ಯವಾದ ಕೊಡುಗೆಯನ್ನು ನೀಡಿರುವ ಸುರಭಿಯನ್ನು ಬೈಂದೂರಿನಿಂದ ಬೇರ್ಪಡಿಸಿ ನೋಡಲಾಗದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ. ಜಗನ್ನಾಥ ಶೆಟ್ಟಿ ವಹಿಸಿದ್ದರು. ಸುರಭಿಯ ನಿರ್ದೇಶಕ ಗಣಪತಿ ಹೋಬಳಿದಾರ್ ಉಪಸ್ಥಿತರಿದ್ದರು.
ಸುರಭಿಯ ಅಧ್ಯಕ್ಷ ಶಿವರಾಮ ಕೊಠಾರಿ ಸ್ವಾಗತಿಸಿ, ಲಕ್ಷ್ಮಣ ಕೊರಗ ವಂದಿಸಿದರು. ನಿರ್ದೇಶಕ ಸುಧಾಕರ ಪಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಯಕ್ಷ ಸುರಭಿ ತಂಡದಿಂದ ಪ್ರಶಾಂತ ಮಯ್ಯ ದಾರಿಮಕ್ಕಿ ಅವರ ನಿರ್ದೇಶನದ ‘ವೀರವೃಷಸೇನ’ ಯಕ್ಷಗಾನ ಪ್ರದರ್ಶನಗೊಂಡಿತು.