ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹೊಸ ಪ್ರತಿಭೆಗಳು ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಭಿನ್ನವಾದ ಕಥಾ ಹಂದರದ ಮೂಲಕ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಉತ್ತಮ ಚಿತ್ರಕಥೆ, ನಿರ್ದೇಶನ ಹಾಗೂ ಛಾಯಾಗ್ರಹಣದಂತೆ ಸಿನೆಮಾದಲ್ಲಿ ಉತ್ತಮ ಸಂಗೀತ ಇದ್ದಾಗಲೇ ಅದು ಯಶಸ್ವಿ ಚಿತ್ರವಾಗಿ ಮೂಡಿಬರುತ್ತದೆ ಎಂದು ಕನ್ನಡದ ಖ್ಯಾತ ಗಾಯಕಿ ಬಿ. ಕೆ ಸುಮಿತ್ರ ಹೇಳಿದರು.
ಅವರು ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ಆಯೋಜಿಸಿದ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನೆಮಾ ’ಕತ್ತಲೆಕೋಣೆ’ ಚಿತ್ರದ ಧ್ವನಿಸಾಂದ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ಕತ್ತಲೆಕೋಣೆ ಚಲನಚಿತ್ರದ ಹಾಡಿನ ಸಾಹಿತ್ಯ ಹಾಗು ಸಂಗೀತ ಮನಮುಟ್ಟುವಂತಿದ್ದು, ಜನರ ಮನಸ್ಸನ್ನು ತಟ್ಟಲಿದೆ. ಸಂಗೀತದೊಂದಿಗೆ ಚಿತ್ರವೂ ಯಶಸ್ಸು ಕಾಣಲಿದೆ ಎಂದರು.
ಮಲೆನಾಡಿನ ಮಡಿಲಲ್ಲಿರುವ ಶಿವಮೊಗ್ಗದಲ್ಲಿ ಯಾವುದಾದರೂ ಕಾರ್ಯಕ್ರಮ ಯಶಸ್ವಿಗೊಂಡರೇ ಅದು ಇಡಿ ರಾಜ್ಯದಲ್ಲೇ ಯಶಸ್ವಿಯಾಗುತ್ತದೆ ಎಂದು ನಿರ್ಧರಿಸಿಬಿಡಬಹುದು. ಇಲ್ಲಿನ ಜನರ ಕಲಾಸಕ್ತಿ ಅಂತಹದ್ದು ಎಂದ ಅವರು ಕತ್ತಲೆಕೋಣೆ ಚಿತ್ರದ ಧ್ವನಿಸಾಂದ್ರಿಕೆ ಬಿಡುಗಡೆ ಕಾರ್ಯಕ್ರಮ ಯಶಸ್ವಿಗೊಂಡಿದೆ. ಚಿತ್ರವೂ ಯಶಸ್ವಿಯಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದರು.
ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಖ್ಯಾತ ನಿರ್ದೇಶಕ ಸಿಂಪಲ್ ಸುನಿ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿದರು. ಗಾಯಕ ಮೆಹಬೂಬ್ ಸಾಬ್, ಚಿತ್ರದ ನಿರ್ಮಾಕರರಾದ ಪುರುಷೋತ್ತಮ ಅಮೀನ್, ಡಾ. ಜಯಲಕ್ಷ್ಮೀ, ಸಹ ನಿರ್ಮಾಪಕರಾದ ಶ್ರೀನಿವಾಸ ಮೂರ್ತಿ ಶಿವಮೊಗ್ಗ, ಕಾರ್ಯಕಾರಿ ನಿರ್ಮಾಪಕ ರಾಘವೇಂದ್ರ ಎ ಶೆಟ್ಟಿ, ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್, ಮಂಜುನಾಥ್ ಸಾಲಿಯಾನ್, ನಟಿ ಹೇನಿಕಾ ರಾವ್, ಸಹ ನಿರ್ದೇಶಕ ಜೀತ್ ಜೋಸೆಫ್, ಛಾಯಾತ್ರಕಾರ ಆರ್.ಕೆ. ಮಂಗಳೂರು, ನಟರಾದ ಅಶ್ವಥ್ ಆಚಾರ್ಯ, ಸುನಿಲ್ ಉಪ್ಪುಂದ, ಉಷಾ ಸಂದೇಶ್ ಶೆಟ್ಟಿ ಹಾಗೂ ಕತ್ತಲೆಕೋಣೆ ಚಿತ್ರತಂಡದ ನಟರು, ತಂತ್ರಜ್ಞರು ಆಡಿಯೋ ಬಿಡುಗಡೆ ವೇಳೆ ಉಪಸ್ಥಿತರಿದ್ದರು.
ಕತ್ತಲೆಕೋಣೆ ಚಿತ್ರದ ನಟ, ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಪ್ರಾಸ್ತಾವಿಕ ಮಾತನಾಡಿ ಏಳು ವರ್ಷದ ಕನಸು ನನಸಾಗುವ ದಿನ ಬಂದಿದೆ. ನೈಜ ಘಟನೆಯಾಧಾರಿತ ಕಥೆಯನ್ನು ಚಿತ್ರಕಥೆಯನ್ನಾಗಿಸಿಕೊಂಡು ಕತ್ತಲೆಕೋಣೆ ಸಿನೆಮಾ ನಿರ್ಮಾಣಗೊಳ್ಳುತ್ತಿದೆ. ವಿಭಿನ್ನ ಸ್ಕ್ರೀನ್‌ಪ್ಲೇ ಮೂಲಕ ಚಿತ್ರ ಸಾಗುತ್ತದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಎಲ್ಲವೂ ಭಿನ್ನವಾಗಿ ಮೂಡಿಬಂದಿದೆ. ಎಪ್ರಿಲ್‌ನಲ್ಲಿ ಚಿತ್ರ ಬಿಡುಗಡೆಗೆ ತಯಾರಿ ನಡೆದಿದೆ ಎಂದರು.
ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್‌ನ ಸಂಸ್ಥಾಪಕಾಧ್ಯಕ್ಷೆ ಶಾಂತಾ ಎಸ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಧನ್ಯವಾದಗೈದರು. ಬಳಿಕ ಖ್ಯಾತ ಗಾಯಕರಾದ ಮೆಹಬೂಬ್ ಸಾಬ್, ಡಾ. ಅಭಿಷೇಕ್ ರಾವ್, ದೀಪಿಕಾ ಶ್ರೀಕಾಂತ್ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಿತು.