ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತ್ರಾಸಿ-ನಾಡ ಗ್ರಾಮಗಳನ್ನು ಸಂಪರ್ಕಿಸಲು ಸೌಪರ್ಣಿಕಾ ನದಿಗೆ ಅಡ್ಡವಾಗಿ ರೂ 7 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಸೇತುವೆ ಕಾಮಗಾರಿಗೆ ಶಾಸಕ ಕೆ. ಗೋಪಾಲ ಪೂಜಾರಿ ಬುಧವಾರ ಮೊವಾಡಿ ಎಂಬಲ್ಲಿ ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಅವರು ಈ ಸೇತುವೆ ಪೂರ್ಣಗೊಂಡಾಗ ನಾಡದ ನಿವಾಸಿಗಳಿಗೆ ಹೆದ್ದಾರಿ ಹತ್ತಿರವಾಗುತ್ತದೆ. ತ್ರಾಸಿಯ ನಿವಾಸಿಗಳಿಗೆ ನಾಡಕ್ಕೆ ನಿಕಟ ಸಂಪರ್ಕ ಏರ್ಪಡುತ್ತದೆ. ಈ ಎರಡೂ ಗ್ರಾಮಗಳ ಅಭಿವೃದ್ಧಿಗೆ ವೇಗ ದೊರೆಯುತ್ತದೆ ಎಂದರು. ಈ ಸೇತುವೆಯನ್ನು ಸಂಪರ್ಕಿಸುವ ರಸ್ತೆಗೆ ಭೂಮಿ ಬಿಟ್ಟುಕೊಟ್ಟಿರುವವರನ್ನು ಅಭಿನಂದಿಸಿದ ಅವರು ಸೇತುವೆ ಮುಗಿಯುವ ಹೊತ್ತಿಗೆ ಸಂಪರ್ಕ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಈ ಪರಿಸರದಲ್ಲಿ ಈಚೆಗೆ ಆಗಿರುವ ಅಭಿವೃದ್ಧಿ ಕೆಲಸಗಳ ವಿವರ ನೀಡಿದ ಅವರು ನಾಡದಲ್ಲಿ ’ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ನಡೆದಿದೆ. ತ್ರಾಸಿ ಭಾಗದ ರಸ್ತೆಗಳನ್ನೂ ಅಭಿವೃದ್ಧಿ ಪಡಿಸಲಾಗಿದೆ. ನಾಡ ಪ್ರದೇಶಕ್ಕೆ ಕುಡಿಯುವ ನೀರು ಪೂರೈಸಲು ಬಹು ಗ್ರಾಮ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು.
ಪಡುಕೋಣೆ ಚರ್ಚ್‌ನ ಧರ್ಮಗುರು ಫ್ರೆಡ್ ಮಸ್ಕರೇಂಞಸ್, ಉದ್ಯಮಿ ಸಿಲ್ವೆಸ್ಟರ್ ಆಲ್ಮೇಡ, ತಾಲೂಕು ಪಂಚಾಯತ್ ಸದಸ್ಯ ನಾರಾಯಣ ಗುಜ್ಜಾಡಿ ಪ್ರದೇಶದ ಬಹುದಿನಗಳ ಬೇಡಿಕೆಯನ್ನು ಈಡೇರಿಸಿಕೊಟ್ಟ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅನಂತ ಮೊವಾಡಿ ಸ್ವಾಗತಿಸಿದರು. ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭು ಕೆನೆಡಿ ಪಿರೇರ ವಂದಿಸಿದರು. ಸುಬ್ರಹ್ಮಣ್ಯ ಆಚಾರ್ ನಿರೂಪಿಸಿದರು. ಡಾನ್ ಬಾಸ್ಕೊ ಶಾಲೆಯ ಫಾ. ಮ್ಯಾಕ್ಷಿಮ್, ಫಾ. ಲಿಯೊ, ತ್ರಾಸಿ ಗ್ರಾ.ಪಂ. ಅಧ್ಯಕ್ಷ ವೆಂಕಟ ಪೂಜಾರಿ, ಉಪಾಧ್ಯಕ್ಷೆ ಜೀತಾ ಡಿಸೋಜ, ಅಭಿವೃದ್ಧಿ ಅಧಿಕಾರಿ ಶೋಭಾ, ನಾಡ ಅಧ್ಯಕ್ಷೆ ಜೇನ್ ಮೇರಿ ಒಲಿವೇರ, ಪ್ರಮುಖರಾದ ಫಿಲಿಫ್ ಡಿಸಿಲ್ವ, ಅಂತೋನಿ ಲೂಯಿಸ್, ಜಯರಾಮ ಶೆಟ್ಟಿ, ಜೆರಾಲ್ಡ್ ಕ್ರಾಸ್ತ, ನಾರಾಯಣ ಶೆಟ್ಟಿ, ರವಿರಾಜ ಶೆಟ್ಟಿ, ಮುಖ್ಯೋಪಾಧ್ಯಾಯಿನಿ ಜ್ಯೋತಿ ಐತಾಳ್, ಗಂಗೊಳ್ಳಿ ಠಾಣಾಧಿಕಾರಿ ಮಧು, ಇತರರು ಇದ್ದರು.