ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದ ಶಾಸಕ ವಿನಯ್ ಕುಮಾರ್ ಸೊರಕೆಯವರು ತಮ್ಮ ಕ್ಷೇತ್ರಕ್ಕೆ ಸರಕಾರದಿಂದ ೧೮೦೦ ಕೋಟಿ ರೂ.ಗೂ ಮೀರಿ ಅನುದಾನವನ್ನು ತಂದರೆ, ಉಡುಪಿ ಕ್ಷೇತ್ರದ ಶಾಸಕ ಪ್ರಮೋದ್ ಮಧ್ವರಾಜ್ ಅವರು 1900 ಕೋಟಿ ಗೂ ಮೀರಿ ಅನುದಾನ ತಂದಿದ್ದಾರೆ. ಹಾಗೆಯೇ ಬೈಂದೂರಿನ ಶಾಸಕ ಗೋಪಾಲ ಪೂಜಾರಿಯವರು ೧೮೦೦ ಕೋಟಿಗೂ ಹೆಚ್ಚು ಅನುದಾನವನ್ನು ಕ್ಷೆತ್ರದ ಅಭಿವೃದ್ಧಿಗೆ ವ್ಯಯಿಸಿದ್ದಾರೆ. ಆದರೆ ಕುಂದಾಪುರ ಕ್ಷೇತ್ರದ ಶಾಸಕರು ಹೆಚ್ಚುವರಿ ಅನುದಾನ ತರಲು ಯಾವುದೇ ಪ್ರಯತ್ನ ಪಡದ ಕಾರಣಕ್ಕೆ ಈ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಇಲ್ಲಿಗೆ ಬಂದ ಅನುದಾನ ೨೦೦ ಕೋಟಿಗೂ ಮೀರಿಲ್ಲದಿರುವುದು ನಮ್ಮ ಮಾಜಿ ಶಾಸಕ ಹಾಲಾಡಿಯವರು ಅದೆಷ್ಟು ನಿಷ್ಕ್ರೀಯರು ಎನ್ನುವುದನ್ನು ಪ್ರತಿಭಿಂಬಿಸುತ್ತದೆ ಎಂದು ಕಾಂಗ್ರೇಸ್ ಪ್ರಚಾರ ಸಮಿತಿ ಅಧ್ಯಕ್ಷ ವಿಕಾಸ್ ಹೆಗ್ಡೆ ಹೇಳಿದ್ದಾರೆ.
ಅವರುಆನಗಳ್ಳಿಯಲ್ಲಿ ನಡೆದ ಹಂಗಳೂರು ತಾಲೂಕು ಪಂಚಾಯತ್ ವ್ಯಾಪ್ತಿಯ ಕಾರ್ಯಕರ್ತರ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಯುವ ಮುಖಂಡ ಕೋಡಿ ಸುನಿಲ್ ಪೂಜಾರಿಯವರ ನೇತೃತ್ವದಲ್ಲಿ ಸುಮಾರು 15ಕ್ಕೂ ಹೆಚ್ಚು ಯುವಕರು ಹಾಗೂ ಹಂಗಳೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸ್ಟೀವನ್ ಡಿ’ಕೋಸ್ಟರ ನೇತೃತ್ವದಲ್ಲಿ ಸುಮಾರು 10ಕ್ಕೂ ಹೆಚ್ಚು ಯುವಕರು ಬಿ.ಜೆ.ಪಿ ತೊರೆದು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಸೇರ್ಪಡೆಯಾದ ಯುವಕರಿಗೆ ಕಾಂಗ್ರೇಸ್ ಚಿಹ್ನೆಯುಳ್ಳ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡ ಇಂಟಕ್ ರಾಜ್ಯ ಅಧ್ಯಕ್ಷ ರಾಕೇಶ್ ಮಲ್ಲಿ ಮಾತನಾಡಿ ಕ್ಷೇತ್ರದಾದ್ಯಂತ ತಾನು ಸಂಚಾರ ಮಾಡಿದ್ದು ಕ್ಷೇತ್ರದ ರೈತರ, ಮಹಿಳೆಯರ, ಧೀನದಲಿತರ, ಕೂಲಿ ಕಾರ್ಮಿಕರ ಹಾಗೂ ಯುವಕರ ಸಮಸ್ಯೆಗಳನ್ನು ಅರಿತಿದ್ದೇನೆ. ಸರ್ಕಾರಿ ಕಚೇರಿಗಳ ಬ್ರಷ್ಟಾಚಾರ ಮಿತಿಮೀರಲು ಶಾಸಕರ ವೈಪಲ್ಯವೇ ಕಾರಣವಾಗಿದೆ, ಕ್ಷೇತ್ರದಾದ್ಯಂತ ಯುವಪಡೆ ಇದೀಗ ಬದಲಾವಣೆ ಬಯಸಿ ಕಾಂಗ್ರೇಸ್ ಬೆಂಬಲಿಸುತ್ತಿದ್ದಾರೆ. ಅದಕ್ಕೆ ಇದೀಗಷ್ಟೆ ಬಿ.ಜೆ.ಪಿ ತೊರೆದು ಕಾಂಗ್ರೇಸ್ ಸೇರಿರುವ ಈ ಯುವಕರ ಪಡೆಯೇ ಪ್ರತ್ಯಕ್ಷ ಸಾಕ್ಷಿ ಎಂದರು.
ಅಧಿಕಾರಕ್ಕೆ ಬಂದಾಗ ಇಡೀ ದೇಶಕ್ಕೆ ಮುಂದಿನ ನೂರು ವರ್ಷಗಳಿಗೆ ಸಾಕಾಗಬಹುದಾದಷ್ಟು ಲಕ್ಷಾಂತರ ಕೋಟಿ ಮೌಲ್ಯದ ರಾಜ್ಯದ ಗಣಿ ಸಂಪತ್ತನ್ನು ಲೂಟಿ ಮಾಡಿ ಚೀನಾಕ್ಕೆ ಮಾರಿದ ಬಿ.ಜೆ.ಪಿ ಸರ್ಕಾರ ಇದೀಗ ಒಂದೇ ಒಂದು ಭ್ರಷ್ಟಾಚಾರ ಆರೋಪ ಇಲ್ಲದೇ ಜನಪರ ಯೋಜನೆಗಳನ್ನು ನೀಡುವ ಮೂಲಕ ಉತ್ತಮ ಆಡಳಿತ ನೀಡಿದ ಸಿದ್ದರಾಮಯ್ಯ ಸರಕಾರದ ವಿರುದ್ಧ ನಿರಾಧಾರವಾದ ಆರೋಪ ಮಾಡುತ್ತಿದ್ದಾರೆ. ಜೈಲಿಗೆ ಹೊಗಿ ಬಂದ ಕರ್ನಾಟಕದ ಪ್ರಪ್ರಥಮ ಮುಖ್ಯಮಂತ್ರಿ ಕುಖ್ಯಾತಿಯ ಯಡಿಯೂರಪ್ಪನವರೇ ಇಂತಹ ಆರೋಪ ಮಾಡುತ್ತೀರುವುದು ನಿಜಕ್ಕೂ ಹಾಸ್ಯಾಸ್ಪದ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಹೇಳಿದರು.
ಇದೀಗ ಕುಂದಾಪುರ ಕ್ಷೇತ್ರದಾದ್ಯಂತ ರಾಕೇಶ್ ಮಲ್ಲಿಯವರ ನೇತೃತ್ವದಲ್ಲಿ ಕಾಂಗ್ರೇಸ್ ಪಕ್ಷದ ಸಭೆ ನಡೆಯುತ್ತಿರುವಂತೆ ಮಾಜಿ ಶಾಸಕ ಹಾಲಾಡಿ ವಿರೋಧಿ ಬಣದ ಬಿಜೆಪಿ ಕಾರ್ಯಕರ್ತರ ಸಭೆ ಕೂಡಾ ನಡೆಯುತ್ತಿದ್ದು ಇಂತಹ ನಿಷ್ಕ್ರೀಯ ಶಾಸಕರನ್ನು ಪದೇಪದೆ ಆಯ್ಕೆ ಮಾಡುವುದರಿಂದ ಕುಂದಾಪುರ ಕ್ಷೇತ್ರ ಅಭಿವೃದ್ಧಿ ಹೊಂದದ ಕ್ಷೇತ್ರಗಳ ಪಟ್ಟಿಯಲ್ಲಿ ಸೇರಿಕೊಳ್ಳುವುದು ಬೇಡ ಹಾಗಾಗಿ ಬದಲಾವಣೆ ಮಾಡಬೇಕು ಎಂದು ಅವರೇ ಹೇಳುತ್ತಿದ್ದಾರೆ ಇದನ್ನು ಕ್ಷೇತ್ರದ ಜನತೆ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಐ.ಟಿ.ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೆಖರ ಶೆಟ್ಟಿ ಕುಂದಾಪುರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಪುತ್ರನ್, ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಛಿತಾರ್ಥ ಶೆಟ್ಟಿ ಮುಖಂಡರಾದ ಹೇರಿಕುದ್ರು ಗಂಗಾಧರ ಶೆಟ್ಟಿ ಲಾರೆನ್ಸ್ ಡಿ’ಸೋಜ, ಹಂಗಳೂರು ಗ್ರಾ.ಪಂ ಉಪಾಧ್ಯಕ್ಷ ಸ್ಟೀವನ್ ಡಿ’ಕೋಸ್ಟ, ಗ್ರಾಮಪಂಚಾಯತ್ ಅಧ್ಯಕ್ಷೆ, ಮರಿಯಾ ಡಿ’ಸೋಜ ಮಾಜಿ ಜಿ.ಪಂ ಸದಸ್ಯೆ ಗೀತಾ ಶಂಭು ಪೂಜಾರಿ, ಗ್ರಾ.ಪಂ ಉಪಾಧ್ಯಕ್ಷೆ ಗೀತಾ ಎಸ್. ಗ್ರಾ.ಪಂ ಸದಸ್ಯೆ ಹಂಗಳೂರು ಸುಧಾಕರ ಪೂಜಾರಿ, ರಾಜೀವ್‌ಗಂದಿ ಪಂಚಾಯತ್ ರಾಜ್ ಸಂಘಟನೆಯ ಕೋಟೇಶ್ವರ ವಲಯ ಅಧ್ಯಕ್ಷ ವಿಜಯಧರ ಪೂಜಾರಿ, ಸುಶೀಲಾ ಪೂಜಾರ‍್ತಿ, ರತ್ನಾವತಿ ಪೂಜಾರ‍್ತಿ, ಸುಗುಣ ಹಾಗೂ ಇನ್ನಿತರ ಸ್ಥಳೀಯ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.