ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ: ಮಕ್ಕಳಿಗೆ ಬಾಲ್ಯದಲ್ಲಿ ಭಾರತೀಯ ಸಂಸ್ಕೃತಿ ಆಧಾರಿತ ಶಿಕ್ಷಣ ನೀಡುವ ಮೂಲಕ ಮಕ್ಕಳಲ್ಲಿ ದೇಶಪ್ರೇಮ ಬೆಳೆಸಲು ಪೋಷಕರು ಸಹಕರಿಸಬೇಕು. ಗುರುಹಿರಿಯರನ್ನು ಗೌರವಿಸುವ ಪ್ರವೃತಿಯನ್ನು ಮಕ್ಕಳಲ್ಲಿ ಬೆಳೆಸಬೇಕು. ಬಾಲ್ಯದಲ್ಲಿ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾವಹಿಸಿ ಮಕ್ಕಳು ದಾರಿ ತಪ್ಪದಂತೆ ಎಚ್ಚರವಹಿಸಬೇಕು. ಮಕ್ಕಳಲ್ಲಿ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ, ಭಾರತೀಯ ಸಂಸ್ಕೃತಿ ಸಂಸ್ಕಾರ ಬೆಳೆಸುವಂತಹ ಮಹತ್ಕಾರ್ಯವನ್ನು ಶಿಶು ಮಂದಿರಗಳು ನಡೆಸುತ್ತಿದ್ದು, ಶಿಶು ಮಂದಿರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಾತಾಜಿಯವರ ಸೇವೆ ಮತ್ತು ತ್ಯಾಗ ಅವಿಸ್ಮರಣೀಯ ಎಂದು ಶಿವಮೊಗ್ಗದ ಉದ್ಯಮಿ ವಿನೋದ ಭಂಡಾರಿ ಹೇಳಿದರು.
ಅವರು ಗಂಗೊಳ್ಳಿಯ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದ ಶ್ರೀ ವಿಜಯ ವಿಠಲ ಮಂಟಪದಲ್ಲಿ ಶನಿವಾರ ಜರಗಿದ ಗಂಗೊಳ್ಳಿ ಸೇವಾ ಸಂಗ ನಿವೇದಿತಾ ಶಿಶು ಮಂದಿರದ ೩೧ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ 30 ವರ್ಷಗಳಿಂದ ನಿರಂತರವಾಗಿ ಗಂಗೊಳ್ಳಿಯಂತಹ ಗ್ರಾಮೀಣ ಪ್ರದೇಶದಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ಬಗ್ಗೆ ಉತ್ತಮ ಭಾವನೆ ಎಲ್ಲೆಡೆ ವ್ಯಕ್ತವಾಗುತ್ತಿದೆ. ಸದಾ ಕ್ರಿಯಾಶೀಲವಾಗಿ ತನ್ನ ಚಟುವಟಿಕೆಗಳನ್ನು ನಡೆಸುತ್ತಾ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುತ್ತಿರುವ ಶಿಶು ಮಂದಿರದ ಕಾರ್ಯ ಶ್ಲಾಘನೀಯ ಎಂದರು.
ಸೇವಾ ಸಂಗಮ ಟ್ರಸ್ಟ್‌ನ ವಿಶ್ವಸ್ಥೆ ರಶ್ಮಿರಾಜ್, ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ದುರ್ಗರಾಜ್ ಪೂಜಾರಿ ಶುಭ ಹಾರೈಸಿದರು. ಸದಸ್ಯರಾದ ವಿಜಯಶ್ರೀ ಆಚಾರ್ಯ, ಅಶ್ವಿತಾ ಜಿ.ಪೈ, ಉಷಾ ಪಾಂಡುರಂಗ ಮಡಿವಾಳ, ವಸಂತಿ ಎನ್.ಖಾರ್ವಿ, ಬಿ.ಲಕ್ಷ್ಮೀಕಾಂತ ಮಡಿವಾಳ, ಜಿ.ಗಣಪತಿ ಶಿಪಾ, ಮಾತಾಜಿ ಸುಮಾ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಿಶು ಮಂದಿರದ ಪುಟಾಣಿಗಳು, ಬಾಲಗೋಕುಲದ ವಿದ್ಯಾರ್ಥಿಗಳು ಮತ್ತು ಮಾತೆಯರಿಗೆ ಬಹುಮಾನ ವಿತರಿಸಲಾಯಿತು.
ಶಿಶು ಮಂದಿರದ ಅಧ್ಯಕ್ಷ ಶ್ರೀನಿವಾಸ ಎಂ. ಸ್ವಾಗತಿಸಿದರು. ಸಂಚಾಲಕ ಡಾ.ಕಾಶೀನಾಥ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾತಾಜಿ ಸುಮನಾ ವರದಿ ವಾಚಿಸಿದರು. ಬಿ.ರಾಘವೇಂದ್ರ ಪೈ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸವಿತಾ ಯು.ದೇವಾಡಿಗ ವಂದಿಸಿದರು.