ಮೋದಿಯದ್ದು ಕಾರ್ಮಿಕ ವಿರೋಧಿ ಸರಕಾರ: ಪ್ರಕಾಶ್
ಕುಂದಾಪುರ: ಬಂಡವಾಳಶಾಹಿಗಳ ಪರವಾಗಿರುವ ಕೇಂದ್ರ ಸರಕಾರ ಹಿಂದಿನ ಸರಕಾರಕ್ಕಿಂತ ಹೆಚ್ಚು ಹಗರಣಗಳಲ್ಲಿ ತೊಡಗಿಕೊಂಡಿದೆ. ಇದು ಜಾರಿಗೆ ತರಲು ಉದ್ದೇಶಿಸಿರುವ ಹೊಸ ಕಾರ್ಮಿಕ ವಿರೋಧಿ ನೀತಿಯು ಕಾರ್ಮಿಕ ವಿರೋಧಿಯಾಗಿದ್ದು, ಕಾರ್ಮಿಕರ ಹಕ್ಕುಗಳನ್ನು ಹತ್ತಿಕ್ಕುವ ಹುನ್ನಾರ ನಡೆಯುತ್ತಿದೆ. ಕಾರ್ಮಿಕರಿಗಾಗಿ ಇರುವ ಐವತ್ನಾಲ್ಕು ಕಾನೂನುಗಳನ್ನು ಮೊಟಕುಗೊಳಿಸಿ ಕೇವಲ ಮೂರು ಕಾನೂನಿಗೆ ಪರಿವರ್ತಿಸುವ ಹುನ್ನಾರದ ಹಿಂದೆ ಬಂಡವಾಳಶಾಹಿಗಳ ಪರವಾದ ದೋರಣೆ ಅಡಗಿದೆ ಎಂದು ಸಿಐಟಿಯು ರಾಜ್ಯ ಮುಖಂಡ ಪ್ರಕಾಶ್ ಆರೋಪಿಸಿದರು.
ಅವರು ಕಾರ್ಮಿಕ ದಿನಾಚರಣೆಯ ಅಂಗವಾಗಿ ಸಿಐಟಿಯು ನೇತೃತ್ವದಲ್ಲಿ ನಡೆದ ಬೃಹತ್ ಮೆರವಣಿಗೆ ಹಾಗೂ ನೆಹರು ಮೈದಾನದಲ್ಲಿ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕೋಟಿ ಕೋಟಿ ಹಣವನ್ನು ಕೇಲವ ಜಾಹೀರಾತಿಗಾಗಿ ಖರ್ಚುಮಾಡಿ ಜನರನ್ನು ಮರುಳುಗೊಳಿಸಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ಕಳೆದ ಒಂದು ವರ್ಷದಿಂದ ಬಡವರು, ಕಾರ್ಮಿಕರ ಏಳಿಗೆಗೆ ಶ್ರಮಿಸಿಲ್ಲ. ಮೆಕ್ ಇನ್ ಇಂಡಿಯಾದಂತಹ ಪರಿಕಲ್ಪನೆಯನ್ನು ಸೃಷ್ಟಿಸಿದ ಮೋದಿ, ದೇಶದ ಜನರಿಗೆ ನೆರವು ಮಾಡಿಕೊಡುವ ಬದಲಿಗೆ ವಿದೇಶಿ ಬಂಡವಾಳದಾರರಿಗೆ ನೆರವು ನೀಡುತ್ತಿದ್ದಾರೆ. ಶ್ರೀಮಂತರಿಗೆ ವಿನಾಯತಿ ನೀಡಲು ಸರಕಾರದ ಬಳಿ ಹಣವಿದೆ. ಆದರೆ ಬಡವರಿಗೆ ಸವಲತ್ತುಗಳನ್ನು ಒದಗಿಸಲು ಸರಕಾರ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.
ಸಿಐಟಿಯು ಮುಖಂಡರಾದ ಎಚ್. ನರಸಿಂಹ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ರಾಜ್ಯ ಸಮಿತಿ ಉಪಾಧ್ಯಕ್ಷ, ಜಿಲ್ಲಾ ಅಧ್ಯಕ್ಷ ಕೆ.ಶಂಕರ್, ಕುಂದಾಪುರ ಪುರಸಭೆ ಅಧ್ಯಕ್ಷೆ ಕಲಾವತಿ ಯು.ಎಸ್., ಸಿ.ಐ.ಟಿ.ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕಾರ್ಮಿಕ ಮುಖಂಡ ಮಹಾಬಲ ವಡೇರಹೋಬಳಿ, ಯು.ದಾಸ ಭಂಡಾರಿ, ಹಂಚು ಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷ ನರಸಿಂಹ, ಕೃಷಿ ಕೂಲಿಕಾರ್ಮಿಕರ ಸಂಘದ ಅಧ್ಯಕ್ಷ ರಾಜೀವ ಪಡುಕೋಣೆ, ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ಲಕ್ಷ್ಮಣ ಬರೆಕಟ್ಟು, ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷೆ ಬಲ್ಕಿಸಾ, ಅಕ್ಷರ ದಾಸೋಹ ಕಾರ್ಮಿಕ ಸಂಘದ ತಾ.ಅಧ್ಯಕ್ಷೆ ಜಯಶ್ರೀ, ಅಂಗನವಾಡಿ ಕಾರ್ಮಿಕರ ತಾಲೂಕು ಅಧ್ಯಕ್ಷೆ ರತಿ ಶೆಟ್ಟಿ, ಆಶಾ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷೆ ವಸಂತಿ ಶೆಟ್ಟಿ, ಕೆಲಸಕಾರರ ಸಂಘದ ಅಧ್ಯಕ್ಷೆ ಜ್ಯೋತಿ, ಡಿವೈಎಫ್‌ಐ ತಾಲೂಕು ಕಾರ್ಯದರ್ಶಿ ರಾಜೇಶ ವಡೇರಹೋಬಳಿ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಮನೋಹರ್ ಪುತ್ರನ್, ಗೌರವಾಧ್ಯಕ್ಷ ಶೀನ ಖಾರ್ವಿ, ಕಾರ್ಯದರ್ಶಿ ಶೇಖರ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪುರ ಮೀನುಮಾರುಕಟ್ಟೆಯ ಫ್ರೆಂಡ್ಸ್ ಸರ್ಕಲ್ ವತಿಯಿಂದ ನಿವೃತ್ತ ಕಾರ್ಮಿಕರಾದ ಸಿ.ನಾರಾಯಣ ಕುಂದಾಪುರ ಮತ್ತು ಅಬ್ರಾಹಂ ಕಾರ್ಕಡ ಅವರನ್ನು ಸಮ್ಮಾನಿಸಲಾಯಿತು. ಸುರೇಶ್ ಕಲ್ಲಾಗರ ಸ್ವಾಗತಿಸಿದರು.