ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಹೊಸಾಡು ಗ್ರಾಪಂ ವ್ಯಾಪ್ತಿಯ ಹೊಸಾಡು-ಬಂಟ್ವಾಡಿ ಸಂಪರ್ಕ ಸೇತುವೆ ಸಮೀಪ ಕೆಲವರು ಚಟ್ಲಿಕೆರೆ ನಿರ್ಮಾಣಕ್ಕಾಗಿ ಹೊಳೆ ಪರಂಬೋಕು ಜಾಗ ಅತಿಕ್ರಮಿಸಿ ರಸ್ತೆ ನಿರ್ಮಿಸುತ್ತಿದ್ದು, ಹೊಳೆಬದಿಯಲ್ಲಿನ ಅಪಾರ ಕಾಂಡ್ಲಾ ವೃಕ್ಷಗಳನ್ನು ನಾಶಪಡಿಸಿದ್ದಾರೆ. ಸಾರ್ವಜನಿಕರ ದೂರಿಗೆ ಸ್ಪಂದಿಸಿ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿದ್ದರೂ ರಸ್ತೆ ನಿರ್ಮಾಣ ಮತ್ತು ಕಾಂಡ್ಲಾ ಗಿಡಗಳ ಮಾರಣಹೋಮ ಮುಂದುವರಿದಿದೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಟ್ವಾಡಿ ಸೇತುವೆ ಪೂರ್ವಭಾಗದಲ್ಲಿ ಸೌಪರ್ಣಿಕಾ ನದಿ ತೀರದಲ್ಲಿ ಚಟ್ಲಿ ಉದ್ಯಮಕ್ಕಾಗಿ ಖಾಸಗಿ ವ್ಯಕ್ತಿಗಳು ನದಿತೀರ ಬಗೆದು ರಸ್ತೆ ನಿರ್ಮಿಸುತ್ತಿದ್ದು, ನದಿತೀರದಲ್ಲಿ ತೀರ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಬೆಳೆಸಿದ್ದ ನೂರಾರು ಕಾಂಡ್ಲಾ ವೃಕ್ಷಗಳನ್ನು ನಾಶ ಪಡಿಸಲಾಗಿದೆ. ನದಿತೀರ ಬಗೆದು ಮಣ್ಣು ತುಂಬಿಸುವ ಸಂದರ್ಭದಲ್ಲಿ ಇಲ್ಲಿನ ಕಾಂಡ್ಲಾ ವೃಕ್ಷಗಳು ಸಮಾಧಿಯಾಗಿರುವುದು ಕಂಡುಬಂದಿದೆ. ಈ ಹಿಂದೆ ಇದೇ ತೀರದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸಲಾಗಿದ್ದು, ನಿರಂತರವಾಗಿ ಕಾಂಡ್ಲಾ ನಾಶ ನಡೆದಿದೆ. ಹೊಸಾಡು-ಬಂಟ್ವಾಡಿ ನದಿಯ ಇಕ್ಕೆಲದಲ್ಲಿ ಸೊಂಪಾಗಿ ಬೆಳೆದಿದ್ದ ಕಾಂಡ್ಲಾ ಕಾಡು ಕ್ರಮೇಣ ಸರ್ವನಾಶದ ಹಾದಿ ಹಿಡಿದಿದ್ದು, ಇದೀಗ ಹೈಟೆಕ್ ಚಟ್ಲಿ ಉದ್ಯಮಕ್ಕೆ ಇಲ್ಲಿನ ನದಿ ತೀರ ಮತ್ತು ಅಳಿದುಳಿದ ಕಾಂಡ್ಲಾ ವೃಕ್ಷಗಳು ಬಲಿಯಾಗಿವೆ ಎಂದು ಹೊಸಾಡು ಮತ್ತು ಬಂಟ್ವಾಡಿ ನಾಗರಿಕರು ದೂರಿದ್ದಾರೆ.
ಅಧಿಕಾರಿಗಳ ಭೇಟಿ: ಹೊಸಾಡು ಗ್ರಾಮದಲ್ಲಿ ಸೌಪರ್ಣಿಕಾ ನದಿತೀರ ಅತಿಕ್ರಮಿಸಿ ರಸ್ತೆ ನಿರ್ಮಾಣ ಮತ್ತು ಕಾಂಡ್ಲಾ ವೃಕ್ಷಗಳ ಜಲಸಮಾಧಿ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದು, ಅರಣ್ಯ ಇಲಾಖಾಧಿಕಾರಿಗಳು ಹಾಗೂ ಕಂದಾಯ ಇಲಾಖಾಧಿಕಾರಿಗಳು ಮಾ. ೭ರಂದು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ನಾಶಪಡಿಸಿದ ಕಾಂಡ್ಲಾ ವೃಕ್ಷಗಳ ಬಾಬ್ತು ಶುಲ್ಕ ವಿಧಿಸಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ ತಿಳಿಸಿದ್ದಾರೆ. ಕಂದಾಯ ನಿರೀಕ್ಷಕ ಹೇಳಿದ್ದಾರೆ.
ಅತಿಕ್ರಮಣ ಅಬಾಧಿತ: ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖಾಧಿಕಾರಿಗಳ ತಾತ್ಕಾಲಿಕ ಕ್ರಮಕ್ಕೆ ಕ್ಯಾರೇ ಎನ್ನದೇ ಮಾ. ೧೭ರಂದು ಬೆಳಿಗ್ಗೆ ಇಲ್ಲಿನ ನದಿತೀರದಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಕಾರ್ಯ ಮತ್ತೆ ಮುಂದುವರಿದಿದೆ. ಜೆಸಿಬಿ ಯಂತ್ರಗಳ ಮೂಲಕ ನದಿತೀರದಲ್ಲಿನ ಕಾಂಡ್ಲಾ ಗಿಡಗಳನ್ನು ಮಣ್ಣಿನಡಿ ಹೂತು ರಸ್ತೆ ನಿರ್ಮಿಸುತ್ತಿರುವುದು ಕಂಡುಬಂದಿದೆ. ಇದರಿಂದಾಗಿ ಸ್ಥಳೀಯರು ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆಯೇ ಸಂಪೂರ್ಣ ಅಸಮಾಧಾನಗೊಂಡಿದ್ದು, ನದಿತೀರ ಅತಿಕ್ರಮಣದಲ್ಲಿ ಅಧಿಕಾರಿಗಳು ಸ್ವತಃ ಶಾಮೀಲಾಗಿದ್ದಾರೆಯೇ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿಗೆ ದೂರು: ಹೊಸಾಡು ಹೊಳೆ ಪರಂಬೋಕು ಜಾಗದ ನಿರಂತರ ಅತಿಕ್ರಮಣ ಹಾಗೂ ಕಾಂಡ್ಲಾ ವೃಕ್ಷ ನಾಶ ತಡೆಯುವ ನಿಟ್ಟಿನಲ್ಲಿ ತಾಲೂಕು ಕೇಂದ್ರದ ಅಧಿಕಾರಿಗಳು ಯಾವುದೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲರಾಗಿರುವ ಹಿನ್ನೆಲೆಯಲ್ಲಿ ಅಕ್ರಮ ತಡೆದು ಪ್ರಾಕೃತಿಕ ಸೊತ್ತು ರಕ್ಷಣೆಗಾಗಿ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಸ್ಥಳೀಯ ನಿವಾಸಿ ಸುರೇಂದ್ರ ಎಂಬುವವರು ಉಡುಪಿ ಜಿಲ್ಲಾಧಿಕಾರಿ ಮೇರಿ ಪ್ರಿಯಾಂಕ ಫ್ರಾನ್ಸಿಸ್ ಅವರಿಗೆ ದೂರು ನೀಡಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.