ಕುಂದಾಪ್ರ ಡಾಟ್ ಕಾಂ ಸುದ್ದಿ
ಮೂಡುಬಿದಿರೆ: ಮಕ್ಕಳಿಗೆ ಬಾಲ್ಯದಲ್ಲೇ ಅವರ ಪ್ರತಿಭೆಗಳಿಗೆ ತಕ್ಕ ಪ್ರೋತ್ಸಾಹ ಕೊಡಬೇಕು. ಪ್ರತಿಭಾ ಪೋಷಕರಾದ ಶೇಖರ ಅಜೆಕಾರು ಒಂದು ಹೆಜ್ಜೆ ಮುಂದೆ ಹೋಗಿ ಅಂಗನವಾಡಿ ಮಕ್ಕಳಿಗೆ ಪ್ರೋತ್ಸಾಹ ನೀಡುವ ಯೋಚನೆ ಮಾಡಿ ೧೭ ಶಾಲೆಯ ೨೦೦ ಕ್ಕೂ ಮಿಕ್ಕ ಪುಟಾಣಿಗಳಿಗೆ ವೇದಿಕೆ ನೀಡಿದ್ದಾರೆ. ಇದೊಂದು ವಿಭಿನ್ನ ಯೋಚನೆ,ಅವರಿಗೆ ನಾವು ಸದಾ ಋಣಿಗಳು ಎಂದು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ದಾಖಲೆಯ
ನಿರೀಕ್ಷೆಯಲ್ಲಿರುವ ಮಂಗಳೂರಿನ ರೆಮೊನಾ ಇವೆಟ್ ಪಿರೇರಾ ಅಭಿಪ್ರಾಯ ಪಟ್ಟರು.ಅವರು ಮೂಡುಬಿದಿರೆಯ ಸಮಾಜಮಂದಿರದಲ್ಲಿ ಸೋಮವಾರ ನಡೆದ ದ.ಕ.ಜಿಲ್ಲೆ೩ಯ ಪ್ರಥಮ ಅಂಗನವಾಡಿ ಮಕ್ಕಳ ಮೇಳವನ್ನು ಪುಗ್ಗೆಗಳನ್ನು ಪುಟಾಣಿಗೆ ವಿತರಿಸುವ ಮೂಲಕ ಉದ್ಘಾಟಿಸಿದರು.
ಮಕ್ಕಳೇ ವೇದಿಕೆಯಲ್ಲಿ ಹೀಗೆ ಅತಿಥಿಗಳಾಗಿರುವುದು, ಇನ್ನೂ ಶಾಲೆಗೆ ಹೋಗುತ್ತಿರುವ ನಾನೇ ಉದ್ಘಾಟಕಿಯಾಗಿರುವುದು ವಿಶಿಷ್ಟ ಅನುಭವ ನೀಡಿದೆ ಎಂದು ಅವರು ಹೇಳಿದರು.
ನೂರಾರು ಪುಟಾಣಿಗಳ ನಡುವೆ ನಡೆದ ಪುಟಾಣಿಲೋಕದ ವೇದಿಕೆಯಲ್ಲಿರುವುದೇ ಬದುಕಿನಲ್ಲಿ ಒಂದು ಮರೆಯಲಾಗದ ಘಟನೆ ಎಂದು ಅಧ್ಯಕ್ಷತೆ ವಹಿಸಿದ್ದ ಮಜಾಭಾರತ ಖ್ಯಾತಿಯ ಬಹುಮುಖ ಪ್ರತಿಭೆ ಆರಾಧನಾ ಭಟ್ ನಿಡ್ಡೋಡಿ ನುಡಿದರು.
ಝೀ ಟಿವಿ ಕುಣಿಯೋಣ ಬಾರಾ ವಿಜೇತೆ ಟ್ಯಾಲೆಂಟ್ಸ್ ಶ್ವೇತಾ ಮೂಡುಬಿದಿರೆ, ಕವಯತ್ರಿ ಅವನಿ ಉಪಾಧ್ಯಾ, ಬಹುಮುಖ ಬಾಲ ಪ್ರತಿಭೆಗಳಾದ ಮಾನ್ವಿ ಎಂ.ಜೈನ್ ಮೂಡುಬಿದಿರೆ, ಸುಜ್ಞಾನ್ ಪೂಜಾರಿ ಕಲ್ಲಬೆಟ್ಟು, ಶಾಲಿನಿ ಭಟ್ ಅಲಂಗಾರು, ಶಿಕ್ಷಣ್ ಮೂಡುಬಿದಿರೆ, ಪ್ರಕೃತಿ ಮಾರೂರು, ಸರ್ವಾಣಿ ಎಸ್.ದೇವಾಡಿಗ ಅತಿಥಿಗಳಾಗಿದ್ದರು.
ಸಂಘಟಕ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ಸ್ಥಾಪಕಾಧ್ಯಕ್ಷ ಶೇಖರ ಅಜೆಕಾರು ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಅಂಗನವಾಡಿ ಪುಟಾಣಿಗಳಾದ ಸುನಿಜ, ಸುನಿಧಿ, ಮಯಾಂಕ್ ಅತಿಥಿಗಳನ್ನು ಗೌರವಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಸೌಮ್ಯಶ್ರೀ ಎಸ್.ಎ, ಗಾಯತ್ರಿ ಕೊಡ್ಯಡ್ಕ, ಕೆ. ಶಾರದಾದೇವಿ, ಅರುಣ್, ಅನಿಲ್, ಉಮೇಶ್, ಧನಂಜಯ ಮುಡುಬಿದಿರೆ, ಯಶೋಧರಾ ಬಂಗೇರ ಸಹಕರಿಸಿದರು.