ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ದೇವಸ್ಥಾನಗಳ ಜೀರ್ಣೋದ್ಧಾರವಾದ ನಂತರ ದೇವಳದಲ್ಲಿ ಮುಖ್ಯವಾಗಿ ನಡೆಯಬೇಕಾದ ಪೂಜೆ, ಪುನಸ್ಕಾರ, ಯಜ್ಞ ಯಾಗಾದಿಗಳು, ಉತ್ಸವಗಳು ಭಜನೆ ಹಾಗೂ ಅನ್ನಸಂತರ್ಪಣೆ ಮುಂತಾದ ಕಾರ್ಯಗಳನ್ನು ಕ್ರಮಬದ್ಧವಾಗಿ ಮುಂದುವರಿಸಿಕೊಂಡು ಹೋಗಬೇಕು. ದೇವಳಗಳು ಧಾರ್ಮಿಕ ಶೃದ್ಧಾಕೇಂದ್ರವಾಗಿರಬೇಕೆ ಹೊರತು ವ್ಯವಹಾರ ಕೇಂದ್ರವಾಗಬಾರದು ಎಂದು ಶಿರೂರು ಜ್ಞಾನದಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾಮಚಂದ್ರ ಬಿ. ಶಿರೂರಕರ್ ಹೇಳಿದರು.
ಶಿರೂರು ಕೋಟೆಮನೆ ಶ್ರೀ ದುರ್ಗಾಂಬಿಕಾ ದೇವಿಯ ಸಾನಿಧ್ಯದಲ್ಲಿ ನಡೆದ 28ನೇ ಪುನರ್‌ಪ್ರತಿಷ್ಠಾ ವರ್ಧಂತ್ಯೋತ್ಸವದ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಭಕ್ತರು ತಮ್ಮ ವರ್ಷದ ದುಡಿಮೆಯಲ್ಲಿ ಒಂದು ದಿನದ ಗಳಿಕೆಯನ್ನು ದೇವಳದ ಧಾರ್ಮಿಕ ಕಾರ್ಯಗಳಿಗೆ ಮೀಸಲಿಟ್ಟರೆ ಸನ್ನಿಧಿಯಲ್ಲಿ ಇನ್ನೂ ಹೆಚ್ಚಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು ಎಂದರು.
ಕೋಟೆಮನೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಅಧ್ಯಕ್ಷ ಕೆ.ಎನ್. ಆಚಾರ್ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ಗೋಪಾಲ ಭೂಸೇನಹಳ್ಳಿ. ನಿವೃತ್ತ ಯೋಧ ರುಕ್ಮಾನಂದ ಮತ್ತವರ ಪತ್ನಿ ಶಿಕ್ಷಕಿ ಲತಾ, ಹಿರಿಯ ಪುರೋಹಿತ ಶ್ಯಾಮ ಅವಭೃತ್ ಅಳ್ವೆಗದ್ದೆ ಹಾಗೂ ಸಮಾಜದ ಹಿರಿಯರಿಗೆ ಸನ್ಮಾನಿಸಲಾಯಿತು. ಬೆಂಗಳೂರು ಚಾರೋಡಿ-ಮೇಸ್ತ ಸಮಾಜದ ಅಧ್ಯಕ್ಷ ಬಿ. ಎಲ್. ನರಸಿಂಹ ಆಚಾರ್, ಮಲೆನಾಡು ಚಾರೋಡಿ ಅಭ್ಯುದಯ ಸಂಘದ ಸದಸ್ಯ ಶ್ರೀಧರ ಆಚಾರ್ ಶಿವಮೊಗ್ಗ ಮತ್ತಿತರರು ಉಪಸ್ಥಿತರಿದ್ದರು.
ದೇವು ಎನ್. ಮೇಸ್ತ ಸ್ವಾಗತಿಸಿ, ಪ್ರದೀಪ ಡಿ. ಮೇಸ್ತ ವಂದಿಸಿದರು. ಶಿಕ್ಷಕ ರಾಮನಾಥ ಮೇಸ್ತ ನಿರೂಪಿಸಿದರು. ನಂತರ ಸ್ಥಳೀಯ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಹಾಗೂ ಕುಂದಾಪುರ ಕಲಾಸ್ಪೂರ್ತಿ ತಂಡದವರಿಂದ ಮನೆ ಒಕ್ಲು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.