ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಇಂದಿನ ತಂತ್ರಜ್ಞಾನ ಯುಗದಲ್ಲಿ ಶಾಂತಿಯುತವಾದ ಹಾಗೂ ಅಹಿಂಸಾ ನೀತಿಯ ಮೌಲ್ಯಾಧಾರಿತ ಜೀವನಶೈಲಿ ವಿರಳವಾಗಿದ್ದು, ಯುವಜನತೆ ಸೋಷಿಯಲ್ ಮೀಡಿಯಾದ ಹೆಚ್ಚು ಉಪಯೋಗದಿಂದ ಸಾಮಾಜಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವುದು ವಿಷಾದನೀಯ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿವಂದನೀಯ ಲಾರೆನ್ಸ್ ಮುಕ್ಕುಯಿ ಹೇಳಿದರು.
ಬೈಂದೂರು ಗ್ರಾಪಂ ವ್ಯಾಪ್ತಿಯ ಕಲ್ಮಕ್ಕಿಯಲ್ಲಿ ನೂತನ ನಿರ್ಮಾಣದ ಸಂತ ಸೆಬಾಸ್ಟಿಯನ್ ಸಮದಾಯ ಭವನವನ್ನು ಭಾನುವಾರ ಸಂಜೆ ಉದ್ಘಾಟಿಸಿ ಆಶೀರ್ವಚನ ನೀಡಿದರು. ಸಮಾಜದಲ್ಲಿ ತಮ್ಮ ಮಕ್ಕಳಿಗೆ ಕೇವಲ ಶಿಕ್ಷಣ ಹಾಗೂ ಉತ್ತಮ ಉದ್ಯೋಗದ ಬಗ್ಗೆ ಮಾತ್ರ ಹೆತ್ತವರು ಕಾಳಜಿವಹಿಸುತ್ತಾರೆ. ಆದರೆ ಜೀವನದ ಸಾರ್ಥಕತೆ ಕುರಿತು ಯಾರಲ್ಲೂ ಚಿಂತನೆ ಇಲ್ಲ. ನಿರ್ದಿಷ್ಟವಾದ ಗುರಿ, ಚೌಕಟ್ಟು ಬದುಕಿಗೆ ಇಲ್ಲವಾದರೆ ಜೀವನದ ಅರ್ಥವೇ ಕೆಟ್ಟು ಹೋಗುತ್ತದೆ. ಯೇಸುಕ್ರಿಸ್ತರ ಭೋಧನೆಯಂತೆ ಮನುಷ್ಯ ಮನುಷ್ಯರ ನಡುವೆ ಬಾಂದ್ಯವ ವೃದ್ಧಿಸಬೇಕು. ಪ್ರೀತಿ ವಿಶ್ವಾಸಗಳಿಂದ ಬಾಳಬೇಕು. ಇಂತಹ ಸೌಹಾರ್ದತೆ ಪರಿಸರ ನಿರ್ಮಾಣವಾದಾಗ ಮಾತ್ರ ಮಕ್ಕಳು ಕೂಡಾ ಭವಿಷ್ಯದಲ್ಲಿ ಉತ್ತಮ ವ್ಯಕ್ತಿಗಳಾಗಲು ಸಾಧ್ಯವಿದೆ ಎಂದರು.
ರೆ. ಫಾ. ಜೋಜಿ ವಡೆಕ್ಕೆವೀಟಿಲ್, ರೆ. ಫಾ. ವರ್ಗೀಸ್ ಪುದಿಯಡೆತ್, ಮಲಬಾರ್ ಕ್ಯಾಥೋಲಿಕ್ ಅಸೋಷಿಯೇಶನ್ ರಾಜ್ಯಾಧ್ಯಕ್ಷ ಸೆಬಾಷ್ಠಿಯನ್ ಕೆ. ಕೆ. ಉಪಸ್ಥಿತರಿದ್ದರು. ಕಲ್ಮಕ್ಕಿ ಚರ್ಚಿನ ಧರ್ಮಗುರು ರೆ. ಫಾ. ಆದರ್ಶ್ ಪುದಿಯಡೆತ್ ಸ್ವಾಗತಿಸಿದರು. ರಾಜೇಶ್ ವರ್ಗೀಸ್ ನಿರೂಪಿಸಿದರು.