ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ತಮ್ಮ ಹಿರಿಯರು ಹಾಕಿಕೊಟ್ಟ ವಿಚಾರಧಾರೆ ಹಾಗೂ ಸ್ವ-ಪ್ರತಿಭೆಯಿಂದ ಸಪ್ತ ಕೊಂಕಣಿ ಸಮುದಾಯದ ಭವ್ಯ ಪರಂಪರೆ ನಡೆದುಬಂದಿದೆ. ಇದನ್ನು ಹೀಗೆಯೆ ಉಳಿಸಿ ಬೆಳೆಸಬೇಕು ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ವಿದ್ಯಾಧಿರಾಜ ತೀರ್ಥ ವಡೇರ ಸ್ವಾಮೀಜಿ ಹೇಳಿದರು.
ಬೈಂದೂರು ಕುಮಟೆಕಾರ್ ನಾಯಕ್ ಕುಂಟುಂಬಿಕರ ಮೂಲ ನಿವಾಸಕ್ಕೆ ತಮ್ಮ ಪಟ್ಟ ಶಿಷ್ಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯೊಡನೆ ಚಿತ್ತೈಸಿ ಕುಟುಂಬಿಕರ ಗುರುಪಾದಪೂಜೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಜಿಎಸ್‌ಬಿ ಸಮಾಜದ ಪರಂಪರೆಯ ಬಲವಾದ ರಕ್ಷಣೆಯಿಂದ ಪರಸ್ಪರ ಪ್ರೀತಿ-ವಿಶ್ವಾಸದಿಂದ ಕೂಡಿ ಕರ್ತವ್ಯವನ್ನು ಪೂಜೆ ಎಂಬ ಭಾವನೆಯಿಂದ, ದುಡಿಮೆಯ ಒಂದಂಶವನ್ನು ಧಾರ್ಮಿಕ ಕಾರ್ಯಗಳಿಗೆ ಬಳಸಿ ಅದರೊಂದಿಗೆ ಜೀವನದಲ್ಲಿ ಸುಖ-ಶಾಂತಿ-ನೆಮ್ಮದಿಯಿಂದ ಬಾಳುವಂತಾಗಿದೆ. ಸನಾತನ ಧರ್ಮದ ಮೂಲ ತತ್ವಗಳನ್ನಾಧರಿಸಿ ಸಾರಸ್ವತರು ತಾವು ನೆಲೆಸಿದ ಸ್ಥಳಗಳಲ್ಲಿ ಸಂಘಟಿತರಾಗಿ ಹಾಗೂ ಭದ್ರವಾಗಿ ನೆಲೆ ಕಂಡುಕೊಂಡಿದ್ದಾರೆ. ಅಲ್ಲದೇ ಇತರರ ಬೆಳವಣಿಗೆ ಜೊತೆಗೆ ತಾವೂ ಬೆಳೆಯಬೇಕೆನ್ನುವ ಧರ್ಮದ ತಳಹದಿಯಲ್ಲಿ ಬದುಕುತ್ತಿರುವುದರಿಂದ ಸಮಾಜದಲ್ಲಿ ಆದರ್ಶಪ್ರಾಯವಾದ ಜೀವನ ನಡೆಸುತ್ತಿದ್ದಾರೆ ಎಂದರು.
ಗೋಧೋಳಿ ಮುಹೂರ್ತದಲ್ಲಿ ನಿವಾಸಕ್ಕೆ ಆಗಮಿಸಿದ ಸ್ವಾಮೀಜಿದ್ವಯರನ್ನು ಅರ್ಚಕ ಜಿ. ವೇದವ್ಯಾಸ ಆಚಾರ್ಯ ನೇತೃತ್ವದಲ್ಲಿ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಮನೆಯ ಹಿರಿಯ ಸದಸ್ಯ ಪ್ರಕಾಶ್ ನಾಯಕ್ ನಮಿತಾ ನಾಯಕ್ ದಂಪತಿಗಳು ಸ್ವಾಮೀಜಿಯವರ ಪಾದಪೂಜೆಗೈದರು. ರಘುವೀರ ನಾಯಕ್, ಶೋಭಾ ಆರ್. ನಾಯಕ್, ಸಂತೋಷ್ ಜಿ. ನಾಯಕ್, ಕಟುಂಬದ ಸದಸ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದರು. ಗೋವಾ-ಮಾರ್ದೋಳ್ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದ ಸಿಂಹಪುರುಷ ಪಾತ್ರಿ ಮಾದನಗೇರಿ ಸುನಿಲ್ ಪೈ ಧಾರ್ಮಿಕ ಪ್ರಾಸ್ತಾವಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಹೇಳಿಕೆ: ಧರ್ಮದ ಕೇಂದ್ರವಾದ ಕುಟುಂಬವು ನಿಜವಾದ ವ್ಯವಸ್ಥೆಯ ಹೆಬ್ಬಾಗಿಲು. ಗ್ರಹಸ್ಥ ಜೀವನದಲ್ಲಿ ಧರ್ಮದ ಮೂಲಕ ಸಾಗಿದಾಗ ಸುಖ, ಶಾಂತಿ ಹಾಗೂ ನೆಮ್ಮದಿ ಶಾಶ್ವತವಾಗಿರುತ್ತದೆ. ಪತಿ-ಪತ್ನಿಯರ ಸಂಬಂಧ ಪಾವಿತ್ರತೆಯ ಭಾವವಿದ್ದು, ಮೌಲ್ಯಾಧಾರಿತವಾಗಿದೆ.- ಶ್ರೀ ವಿದ್ಯಾಧಿರಾಜ ತೀರ್ಥ ವಡೇರ ಸ್ವಾಮೀಜಿ, ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರು.